ತೆಕ್ಕಟ್ಟೆಯಲ್ಲಿ “ಬತ್ತದ ಚಿತ್ರಗಳು” ಕವನ ಸಂಕಲನ ಬಿಡುಗಡೆ
"ಸ್ವಾತಂತ್ರ್ಯ, ಸಹಬಾಳ್ವೆಯೊಂದಿಗೆ ಒಂದು ಸಾಂಸ್ಕೃತಿಕ ಅರಿವನ್ನು ಮೂಡಿಸುವ ಪ್ರಯತ್ನ ಮತ್ತು ವರ್ತಮಾನದ ತಲ್ಲಣಗಳೇ ಇಲ್ಲಿನ ಕವಿತೆಗಳಲ್ಲಿ ಕಾಣುವ ಪ್ರಮುಖ ಅಂಶ" ---- ಡಾ. ರೇಖಾ.ಜಿ. ಬನ್ನಾಡಿ, ನಿವೃತ್ತ ಕನ್ನಡ ಪ್ರಾಧ್ಯಾಪಕರು
Views: 57
ಕನ್ನಡ ಕರಾವಳಿ ಸುದ್ದಿ: ಪ್ರೊ.ರಾಘವೇಂದ್ರ ಹೇರ್ಳೆ ಗಿಳಿಯಾರು, ಡಾ. ಶ್ರೀನಿವಾಸ ಗಿಳಿಯಾರು ಹಾಗೂ ಡಾ.ಕೃಷ್ಣರಾಜ ಕರಬ ಉಳ್ತೂರು ಇವರ ಮಿತ್ರತ್ವದ ನೆನಪಿಗಾಗಿ ರಚಿಸಲ್ಪಟ್ಟ “ಬತ್ತದ ಚಿತ್ರಗಳು” ಎಂಬ ಕವನ ಸಂಕಲನವನ್ನು ಬಹು ಓದು ಬಳಗ, ಮಂಗಳೂರು ಮತ್ತು ಆಕೃತಿ ಆಶಯ ಪ್ರಕಾಶನ, ಮಂಗಳೂರು ಇವರ ಆಶ್ರಯದಲ್ಲಿ ಅಕ್ಟೋಬರ್ 26ರಂದು ತೆಕ್ಕಟ್ಟೆ ಹಯಗ್ರೀವ ಸಭಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಬರಹಗಾರರು, ಚಿಂತಕರು ನಿವೃತ್ತ ಕನ್ನಡ ಪ್ರಾಧ್ಯಾಪಕರು ಆದ ಡಾ. ರೇಖಾ.ಜಿ. ಬನ್ನಾಡಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ಮೂರು ದಶಕಗಳ ಸ್ನೇಹವನ್ನು ರುಜು ಮಾಡಿದ ಈ ಕೃತಿ ವಿಶೇಷವಾಗಿ ಸ್ವಾತಂತ್ರ್ಯ, ಸಹಬಾಳ್ವೆಯೊಂದಿಗೆ ಒಂದು ಸಾಂಸ್ಕೃತಿಕ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದೆ. ಶ್ರಮ ಭರವಸೆ ಪ್ರೀತಿಯೊಂದಿಗೆ ಬಹುತ್ವವೇ ದೇಶದ ಉಸಿರಾಗಿದೆ. ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಳ್ಳುವ ಸೂಕ್ಷ್ಮತೆಯಿಂದ ನಮ್ಮೆದುರಿನ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು.ವರ್ತಮಾನದ ತಲ್ಲಣಗಳೇ ಇಲ್ಲಿನ ಕವಿತೆಗಳಲ್ಲಿ ಕಾಣುವ ಪ್ರಮುಖ ಅಂಶ ಎಂದರು.
ಡಾ. ದತ್ತಾತ್ರಯ ಗಾಂವ್ಕರ ಪ್ರಾಂಶುಪಾಲರು ವಿಶ್ವ ದರ್ಶನ ಪದವಿ ಪೂರ್ವ ಕಾಲೇಜು, ಎಲ್ಲಾಪುರ ಇವರು ಕೃತಿಪರಿಚಯ ಮಾಡುತ್ತಾ , ಚರಿತ್ರೆ ಮತ್ತೆ ಮತ್ತೆ ಮರು ವಿಮರ್ಶೆಗೆ ಒಳಗೊಳ್ಳಬೇಕು. ಕವಿತೆ ಅಂತರ್ ದೃಷ್ಟಿಯಿಂದ ಕೂಡಿರಬೇಕು. ಕವಿ ತನ್ನ ಆತ್ಮದ ಜೊತೆ ಮಾತನಾಡಿಕೊಂಡರೆ ಮಾತ್ರ ಉತ್ತಮ ಕವಿತೆ ಹುಟ್ಟುವುದು ಸಾಧ್ಯ. ಬತ್ತದ ಚಿತ್ರಗಳು ಈ ಕವಿತಾ ಸಂಕಲನವು ಸಮಾಜಮುಖಿಯಾಗಿ ಹತ್ತು ಹಲವು ದಿಕ್ಕುಗಳಲ್ಲಿ ವಸ್ತು ಪ್ರತಿಮೆಗಳನ್ನು ಬಳಸಿಕೊಂಡು ಆಧುನಿಕ ಕಾಲದ ಸಮಸ್ತ ವಿಚಾರಗಳೆಡೆಗೆ ಮುಖ ಮಾಡಿ ತನ್ನ ಕಾವ್ಯ ಧರ್ಮವನ್ನು ಮೆರೆದಿದೆ ಎಂದರು.
ಮುಖ್ಯ ಅತಿಥಿಯಾಗಿ ಡಾ. ಹಯವದನ ಉಪಾಧ್ಯ, ಚಿಂತಕರು, ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು ಇವರು ಮಾತನಾಡಿ, ಸಾಹಿತ್ಯದ ಓದು ಆಸಕ್ತಿ ನಶಿಸುವ ಸಂದರ್ಭದಲ್ಲಿ ಇದು ಉತ್ತಮ ಪ್ರಯತ್ನ. ಸಂವೇದನಾ ಶೀಲದ ಹೊಸ ದೃಷ್ಟಿಕೋನದಿಂದ ಹೊಸ ವ್ಯವಸ್ಥೆಯನ್ನು ಹುಟ್ಟು ಹಾಕಬೇಕೆಂದರು. ಅತಿಥಿ ಶ್ರೀ ಬಿ.ರಾಜೀವ ಶೆಟ್ಟಿ ಬೇಳೂರು ನಿವೃತ್ತ ಮುಖ್ಯೋಪಾಧ್ಯಾಯರು ಮಾತನಾಡಿ, ಸಮಾಜಮುಖಿಯಾದ ಕವಿತೆಗಳು ಈ ಮೂವರು ಲೇಖಕರಿಂದ ಮೂಡಿಬಂದಿವೆ. ಇವರ ಶ್ರಮಕ್ಕೆ ಸಾರ್ಥಕತೆ ಲಭಿಸಲಿ ಎಂದು ಶುಭ ಕೋರಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರೊ. ಉಪೇಂದ್ರ ಸೋಮಯಾಜಿ, ಸಾಹಿತಿಗಳು, ನಿವೃತ್ತ ಕನ್ನಡ ಪ್ರಾಧ್ಯಾಪಕರು ಇವರು ಮಾತನಾಡುತ್ತಾ ತೀವ್ರವಾದ ಭಾವನೆಗಳು ಒಟ್ಟು ಸಮ್ಮಿಳಿತವಾದಾಗ ಕವನ ಹುಟ್ಟುತ್ತದೆ. ಬರಹದಲ್ಲಿ, ತುಡಿತದಲ್ಲಿ ಭಾವನೆಗಳು ತುಂಬಿರಬೇಕು. ಅಂತಹ ಬರಹ ಗಾಂಭೀರ್ಯದಿಂದ ಕೂಡಿರುತ್ತದೆ. ಕವಿತೆ ಸ್ವಂತಿಕೆ ಮೆರೆಯುವ ವಿವೇಚನೆಯಿಂದ ಹೊರಹೊಮ್ಮುವ ಭಾವನೆಗಳಾಗಬೇಕು ಎಂದರು.
ಡಾ.ಆಶಾಲತ ಚೇವಾರ್ ರವರು ಕಾರ್ಯಕ್ರಮ ನಿರೂಪಿಸಿದರು.ಡಾ. ಶ್ರೀನಿವಾಸ ಗಿಳಿಯಾರ್ ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಡಾ. ಕೃಷ್ಣರಾಜ ಕರಬ ಕವಿತೆ ಹುಟ್ಟಿದ ಬಗೆಯ ಬಗ್ಗೆ ತನ್ನ ಅನಿಸಿಕೆಯನ್ನು ಹಂಚಿಕೊಂಡರು. ಡಾ. ಸತೀಶ್ ಚಿತ್ರಾಪು ಸಂಚಾಲಕರು ಬಹು ಓದು ಬಳಗ ಮಂಗಳೂರು ಇವರು ವಂದಿಸಿದರು.






