ರಾಜಕೀಯ

370 ರದ್ದು ನಿರ್ಧಾರ ಸರಿ ಎಂದು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿಯುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟ

Views: 0

ನವದೆಹಲಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯ ಎತ್ತಿ ಹಿಡಿಯುವ ಮೂಲಕ ಐತಿಹಾಸಿಕ ತೀರ್ಪು ಪ್ರಕಟಿಸಿದೆ. 370ನೇ ವಿಧಿಯನ್ನು ರದ್ದುಪಡಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.

ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ.ವಿಶೇಷ ಸ್ಥಾನಮಾನ ಎನ್ನುವುದು ತಾತ್ಕಾಲಿಕ, ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರಕ್ಕೆ 2024ರ ಸೆಪ್ಟಂಬರ್ ಒಳಗೆ ಚುನಾವಣೆ ನಡೆಸಿ ಜೊತೆಗೆ ಸಾಧ್ಯವಾದಷ್ಟು ಬೇಗ ರಾಜ್ಯದ ಸ್ಥಾನ ಮಾನ ನೀಡಲು ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ,ಕಲಂ 370 ವಿಧಿ ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಸಂವಿಧಾನದ ಅಡಿ ಸರಿಯಾಗಿಯೇ ಇದೆ ಎಂದು ಸಮರ್ಥಿಸಿಕೊಂಡು ಮಹತ್ವದ ತೀರ್ಪು ನೀಡಿದೆ.ರಾಷ್ಟ್ರಪತಿಗಳು ಕೈಗೊಂಡ ನಿರ್ಧಾರದ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ370 ನೇ ವಿಧಿಯ ರದ್ದು ಮಾಡುವ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಸಂವಿಧಾನದ ಕಲಂ 370 ಅಡಿಯಲ್ಲಿ ಸಾಂವಿಧಾನಿಕ ಏಕೀಕರಣದ ಕ್ರಮೇಣ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಇತಿಹಾಸ ತೋರಿಸುತ್ತದೆ. 70 ವರ್ಷಗಳ ನಂತರ ಭಾರತದ ಸಂವಿಧಾನ ಒಂದೇ ಬಾರಿಗೆ ಅನ್ವಯಿಸಿದಂತೆ ಅಲ್ಲ. ಇದು ಏಕೀಕರಣ ಪ್ರಕ್ರಿಯೆಯ ಪರಾಕಾಷ್ಠೆಯಾಗಿತ್ತು ಎಂದು ನ್ಯಾಯಪೀಠ ಹೇಳಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯ ಇತರ ರಾಜ್ಯಗಳಿಗಿಂತ ಭಿನ್ನವಾದ ಆಂತರಿಕ ಸಾರ್ವಭೌಮತ್ವ ಹೊಂದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರಿದಾಗ ಸಾರ್ವಭೌಮತ್ವ ಅಥವಾ ಆಂತರಿಕ ಸಾರ್ವಭೌಮತ್ವದ ಅಂಶ ಉಳಿದುಕೊಂಡಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ

ಜಮ್ಮು ಮತ್ತು ಕಾಶ್ಮೀರ ರಾಜ್ಯ ಭಾರತದ ಅವಿಭಾಜ್ಯ ಅಂಗ ಎಂಬುದು ಭಾರತದ ಸಂವಿಧಾನದ 1 ಮತ್ತು 370 ನೇ ವಿಧಿಗಳಿಂದ ಸ್ಪಷ್ಟವಾಗಿದೆ. 2018ರ ಡಿಸೆಂಬರ್ ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಿಸಲಾದ ರಾಷ್ಟ್ರಪತಿ ಆಳ್ವಿಕೆಯ ಸಿಂಧುತ್ವವನ್ನು ಅರ್ಜಿದಾರರು ನಿರ್ದಿಷ್ಟವಾಗಿ ಪ್ರಶ್ನಿಸದ ಕಾರಣ ತೀರ್ಪು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.ಕಲಂ 356 ರ ಅಡಿಯಲ್ಲಿ ಘೋಷಣೆ ಜಾರಿಗೆ ಬಂದಾಗ, ಕೇಂದ್ರ ಸರ್ಕಾರ ಲೆಕ್ಕವಿಲ್ಲದಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿಯೊಂದು ಕ್ರಿಯೆಯನ್ನು ಸವಾಲು ಮಾಡಲಾಗುವುದಿಲ್ಲ ಎಂದು ಅರ್ಜಿದಾರಿಗೆ ನ್ಯಾಯಪೀಠ ಸೂಚನೆ ನೀಡಿದೆ.

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವಾರು ಅರ್ಜಿಗಳನ್ನು ಸುಪ್ರೀಂಕೋರ್ಟ್ ಆಗಸ್ಟ್ 2ರಿಂದ ವಿಚಾರಣೆ ಪ್ರಾರಂಭಿಸಿತ್ತು 16 ದಿನಗಳ ವಿಚಾರಣೆಯ ನಂತರ ಸುಪ್ರೀಂ ತನ್ನ ತೀರ್ಪನ್ನು ಸೆಪ್ಟೆಂಬರ್ 5 ರಂದು ಕಾಯ್ದಿರಿಸಿತ್ತು.

ಕೇಂದ್ರ ಸರ್ಕಾರದ ಪರ ಸುಪ್ರೀಂಕೋರ್ಟ್‌ನಲ್ಲಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಹರೀಶ್ ಸಾಳ್ವೆ, ರಾಕೇಶ್ ದ್ವಿವೇದಿ, ವಿ ಗಿರಿ ಮತ್ತು ಇತರರು ಮತ್ತು 370 ನೇ ವಿಧಿಯ ನಿಬಂಧನೆಗಳ ರದ್ದತಿ ಸಮರ್ಥಿಸಿಕೊಂಡಿದ್ದರು

ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಗೋಪಾಲ್ ಸುಬ್ರಮಣಿಯಂ, ರಾಜೀವ್ ಧವನ್, ಜಾಫರ್ ಶಾ ಮತ್ತು ದುಷ್ಯಂತ್ ದವೆ ಸೇರಿದಂತೆ ಹಿರಿಯ ವಕೀಲರು ವಾದ ಮಂಡಿಸಿದ್ದರು.

ಆರ್ಟಿಕಲ್ 370 ರ ಸುಪ್ರೀಂ ತೀರ್ಪಿನ ಮೊದಲು ಕಾಶ್ಮೀರದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ ಜಮ್ಮು ಮತ್ತು ಕಾಶ್ಮೀರದ ಸೂಕ್ಷ್ಮ ಭಾಗಗಳಲ್ಲಿ, ವಿಶೇಷವಾಗಿ ಬೇಸಿಗೆಯ ರಾಜಧಾನಿ ಶ್ರೀನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ ಅಧಿಕಾರಿಗಳು ಭದ್ರತಾ ವ್ಯವಸ್ಥೆ ಬಲಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಗ ನಿರ್ಧಾರ ಕೈಗೊಳ್ಳಿ

“2024ರ ಸೆಪ್ಟಂಬರ್ ಅಂತ್ಯದೊಳಗೆ ಜಮ್ಮು ಕಾಶ್ಮೀರಕ್ಕೆ ವಿಧಾನಸಭೆ ಚುನಾವಣೆ ನಡೆಸುವ ಮೂಲಕ ರಾಜ್ಯದ ಸ್ಥಾನ ಮಾನ ಪುನಃ ನೀಡಿ, ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಿ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಜಮ್ಮು ಕಾಶ್ಮೀರ ಅವಿಭಾಜ್ಯ ಅಂಗ. ಹೀಗಾಗಿ ಪ್ರತ್ಯೇಕ ಸಂವಿಧಾನ, ವಿಶೇಷ ಸೌಲಭ್ಯ ಅನ್ವಯವಾಗದು?”.

ಮುಖ್ಯನ್ಯಾಯಮೂರ್ತಿ, ಡಿ.ವೈ ಚಂದ್ರಚೂಡ್

ಗೃಹ ಬಂಧನ ಸುಪ್ರೀಂಕೋರ್ಟ್ ತೀರ್ಪು ನೀಡುವ ಮುನ್ನ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ನಾಯಕರು ತಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಪ್ರಮುಖ ನಾಯಕರ ನಿವಾಸದ ಗುಪ್ಕರ್ ರಸ್ತೆಯ ಮೇಲೆ ಕೆಲವು ನಿರ್ಬಂಧ ಹಾಕಲಾಗಿದೆ.

ಮೆಹಬೂಬಾ ಅವರ ಪುತ್ರಿ ಇಲ್ತಿಜಾ ಮುಫ್ತಿ ಅವರನ್ನು ನಗರದ ಹೊರವಲಯದಲ್ಲಿರುವ ಅವರ ಖಿಂಬರ್ ನಿವಾಸದಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ. ಮೆಹಬೂಬ ಅವರಲ್ಲದೆ ಅನೇಕ ನಾಯಕರನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ

ಈ ನಡುವೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರದ ಯಾವ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ

Related Articles

Back to top button
error: Content is protected !!