ರಾಜ್ಯದಲ್ಲೇ ಅತಿ ದೊಡ್ಡ ಡ್ರಗ್ಸ್ ಕಾರ್ಯಾಚರಣೆ:ಇಬ್ಬರು ವಿದೇಶಿ ಪ್ರಜೆಗಳ ಬಂಧನ

Views: 45
ಕನ್ನಡ ಕರಾವಳಿ ಸುದ್ದಿ ರಾಜ್ಯದಲ್ಲೇ ಅತೀ ದೊಡ್ಡ ಡ್ರಗ್ಸ್ ಕಾರ್ಯಾಚರಣೆ ನಡೆದಿದ್ದು, ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ 75 ಕೋಟಿ ರೂ. ಮೌಲ್ಯದ 37.87 ಕೆಜಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಬಾಂಬಾ ಫಾಂಟಾ ಅಲಿಯಾಸ್ ಅಡೋನಿಸ್ ಜಬುಲೀ 51), ಅಬಿಗೈಲ್ ಅಡೋನಿಸ್(30) ಬಂಧಿತರು.
ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಪಂಪ್ ವೆಲ್ ಬಳಿಯ ಲಾಡ್ಜ್ ವೊಂದರಲ್ಲಿ ಉಳಿದುಕೊಂಡು ಮಾದಕ ವಸ್ತುವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿ ಹೈದರ್ ಅಲಿಯಾಸ್ ಹೈದರ್ ಅಲಿ ಎಂಬಾತನನ್ನು 2024 ರಲ್ಲಿ ದಸ್ತಗಿರಿ ಮಾಡಲಾಗಿತ್ತು. ಆತನಿಂದ 15 ಗ್ರಾಂ ಎಂಡಿಎಂಎಯನ್ನು ಸ್ವಾಧೀನಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಡ್ರಗ್ ಪೆಡ್ಡರ್‌ಗಳನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಕರಣದ ತನಿಖೆಯನ್ನು ಮಂಗಳೂರು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು.
ವಾರಕ್ಕೆ 15-30 ಕೆಜಿ ಮತ್ತು ತಿಂಗಳಿಗೆ ಕನಿಷ್ಠ 100 ಕೆಜಿ ಎಮ್‌ಡಿಎಮ್‌ಎ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ತಿಂಗಳಿಗೆ ಕನಿಷ್ಠ 50-60 ಕೋಟಿ ರೂಪಾಯಿ ಡ್ರಗ್ ವಹಿವಾಟು ನಡೆಯುತ್ತದೆ ಎಂಬ ಅಂಶ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಕಾರ್ಯಾಚರಣೆ ನಡೆದಿದೆ. ದಕ್ಷಿಣ ಆಫ್ರಿಕಾ ದೇಶದ ಇಬ್ಬರು ಮಹಿಳಾ ಪ್ರಜೆಗಳನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.