ಬಸ್ರೂರು ಮೂಡ್ಕೇರಿ ಗರಡಿಮನೆ ವಿಚಾರ ತಕರಾರು: ಹುಲ್ಲು ಕೊಯ್ಯುವ ಮೆಷಿನ್ ಹಾಯಿಸಿ ಕೊಲೆಗೆ ಯತ್ನ..! ದೂರು, ಪ್ರತಿದೂರು

Views: 469
ಕನ್ನಡ ಕರಾವಳಿ ಸುದ್ಧಿ: ಗರಡಿ ಮನೆ ಮತ್ತು ಜಾಗದ ವಿಚಾರವಾಗಿ ತಕರಾರು ನಡೆದು ಹುಲ್ಲು ಕೊಯ್ಯುವ ಮೆಷಿನ್ ಹಾಯಿಸಿ ಕೊಲೆಗೆ ಯತ್ನಿಸಿ ವ್ಯಕ್ತಿಯೊಬ್ಬರ ಕೈಗೆ ಗಂಭೀರ ಗಾಯಗೊಂಡ ಘಟನೆ ಜ.21 ರಂದು ಬೆಳಿಗ್ಗೆ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮೂಡ್ಕೇರಿ ಗರಡಿಮನೆ ಬಳಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿ ಮೂಡ್ಕೇರಿ ಗರಡಿಮನೆ, ಮೂಡ್ಕೇರಿ ಕೇಶವ ಪೂಜಾರಿ(48) ಎಂದು ಗುರುತಿಸಲಾಗಿದೆ.
ಏನಿದು ತಕರಾರು: ಬಸ್ರೂರಿನ ದಿ.ಗೋಪಾಲ ಪೂಜಾರಿಯವರ ಮಗ ಕೇಶವ ಎಂಬವರ ಗದ್ದೆಯಲ್ಲಿ ವಿಠಲ ಪೂಜಾರಿ ಎಂಬವರು ಅಕ್ರಮವಾಗಿ ಹುಲ್ಲು ಕೊಯ್ಡ ಕಾರಣಕ್ಕೆ ಎರಡೂ ಕಡೆಯವರ ನಡುವೆ ಗಲಾಟೆ, ಹೊಡೆದಾಟ ನಡೆದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿವೆ.
ಕೇಶವ ಮತ್ತು ವಿಠಲ ಪೂಜಾರಿ ಕಡೆಯವರ ನಡುವೆ ಜಾಗ ಮತ್ತು ಗರಡಿ ಮನೆ ವಿಚಾರವಾಗಿ ತಕರಾರು ಇದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ವಿಠಲ ಪೂಜಾರಿ ಹುಲ್ಲು ಕೊಯ್ಯುವ ಮೆಷಿನ್ ತಂದು ಮೂಡ್ಕೇರಿ ಗರಡಿಮನೆ ಬಳಿ ಇರುವ ಕೇಶವರ ಗದ್ದೆಗೆ ಅಕ್ರಮ ಪ್ರವೇಶ ಮಾಡಿ ಏಕಾಏಕಿ ಹುಲ್ಲು ಕೊಯ್ಯುವಾಗ ಕೇಶವ ವಿರೋಧಿಸಿದರು. ವಿಠಲ ಪೂಜಾರಿ ಮತ್ತು ವಿನೋದ ಸಿಟ್ಟುಗೊಂಡು ಅವಾಚ್ಯ ಶಬ್ದಗಳಿಂದ ಬೈದು ಹೊಡೆಯಲು ಬಂದಿದ್ದರು ಎನ್ನಲಾಗಿದೆ. ಆಗ ಕೇಶವ ಕೋರ್ಟ್ ನಲ್ಲಿ ಕೇಸು ಇರುವಾಗ ಹುಲ್ಲು ಕೊಯ್ಯಬಾರದು ಎಂದು ಹೇಳಿದರು. ಇಷ್ಟಕ್ಕೇ ಕೆರಳಿದ ವಿಠಲ ಪೂಜಾರಿ ತನ್ನ ಕೈಯಲ್ಲಿದ್ದ ಹುಲ್ಲು ಕೊಯ್ಯುವ ಮೆಷಿನ್ ಅನ್ನು ಅವರ ಮೇಲೆ ಹಾಯಿಸಿ ಇಲ್ಲೇ ಕೊಂದು ಬಿಡುತ್ತೇನೆ ಎಂದು ಹೇಳಿದವರು ಯಂತ್ರವನ್ನು ಅವರ ಮೇಲೆ ಹಾಯಿಸಿದ್ದಾರೆ.
ಆಗ ಕೇಶವ ತಪ್ಪಿಸಿಕೊಳ್ಳಲು ತನ್ನ ಎಡ ಕೈಯನ್ನು ಅಡ್ಡ ತಡೆದಾಗ ಮೆಷಿನ್‌ನ ಬ್ಲೇಡ್ ಅವರ ಎಡಕೈ ಹಸ್ತಕ್ಕೆ ಮತ್ತು ಬೆರಳಿಗೆ ತಾಗಿ ಗಂಭೀರ ಗಾಯಗೊಂಡಿರುತ್ತಾರೆ. ಅಲ್ಲಿಯೇ ಇದ್ದ ಉಳಿದ ಆರೋಪಿಗಳಾದ ಅಪ್ಪು ಪೂಜಾರಿ,ಉದಯ ಪೂಜಾರಿ, ವಿನೋದ, ರಾಘವೇಂದ್, ರಘು ಪೂಜಾರಿ, ರಾಘು ಪೂಜಾರಿ, ಸುಮತಿ, ಶಂಕರ ಪೂಜಾರಿ ಕೂಡ ಕೇಶವನನ್ನು ಸಾಯಿಸು ಎಂದು ಹೇಳಿದ್ದಾರೆ. ಆಗ ಕೇಶವರ ತಂಗಿ ತಪ್ಪಿಸಲು ಓಡಿ ಬಂದಾಗ ಅವರಿಗೂ ವಿನೋದ ಎಂಬವರು ಕೈಯಿಂದ ಮುಖಕ್ಕೆ, ಕೈ ರಟ್ಟೆಗೆ ಹೊಡೆದಿರುತ್ತಾರೆ. ಅವರೆಲ್ಲರಿಗೂ ಕೇಶವರನ್ನು ಹತ್ಯೆಗೆಯ್ಯುವ ಉದ್ದೇಶವಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೀಗ ವಿಠಲ್ ಪೂಜಾರಿ, ಅಪ್ಪು ಪೂಜಾರಿ, ಉದಯ ಪೂಜಾರಿ, ವಿನೋದ, ರಾಘವೇಂದ್ರ, ರಘು ಪೂಜಾರಿ, ರಾಘು ಪೂಜಾರಿ, ಸುಮತಿ, ಶಂಕರ ಪೂಜಾರಿ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳು ಪ್ರತಿದೂರು ದಾಖಲಿಸಿದ್ದಾರೆ.