ಸಾಂಸ್ಕೃತಿಕ
ಹೆಸರಾಂತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ನಿಧನ

Views: 129
ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್( 76) ಹೃದಯಾಘಾತದಿಂದ ಜುಲೈ 5ರಂದು ನಿಧನರಾದರು.

ನಿಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ನಿವಾಸಿ ಶ್ರೀಧರ್ ರಾವ್ ಅವರು ಬೆಳಿಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಕೊನೆಯುಸಿರೆಳೆದರು.
ಇವರು ಧರ್ಮಸ್ಥಳ ಮೇಳದಲ್ಲಿ 50 ವರ್ಷಗಳ ಕಾಲ ಸೇವೆ ಮಾಡಿದ್ದರು. ಕೂಡ್ಲು, ಮುಲ್ಕಿ, ಇರಾ, ಕರ್ನಾಟಕ ಮೇಳದಲ್ಲಿ ಆರು ದಶಕಗಳಿಗೂ ಹೆಚ್ಚು ಕಲಾಸೇವೆ ಮಾಡಿದ್ದಾರೆ.

ತೆಂಕುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಮಾಡಿರುವ ಅವರು ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ ಮುಂತಾದ ಪಾತ್ರಗಳಿಂದ ದೊಡ್ಡ ಹೆಸರು ಮಾಡಿದವರು. ಪುರುಷ ವೇಷದಲ್ಲಿಯೂ ಸೈ ಎನಿಸಿಕೊಂಡಿದ್ದರು.
ಮೃತರ ಪತ್ನಿ ನಿವೃತ್ತ ಶಿಕ್ಷಕಿ ಸುಲೋಚನ, ಪುತ್ರರಾದ ಪತ್ರಕರ್ತ ಗಣೇಶ್ ಪ್ರಸಾದ್ ಮತ್ತು ದೇವಿ ಪ್ರಸಾದ್ ಅವರನ್ನು ಅಗಲಿದ್ದಾರೆ






