ಜನಮನ

ಸಾಸ್ತಾನ: ಸ್ಥಳೀಯ ವಾಹನಗಳಿಗೆ ಟೋಲ್ ಕಡಿತ, ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ

Views: 67

ಸಾಸ್ತಾನ : ಇಲ್ಲಿನ ಗುಂಡ್ಮಿ ಟೋಲ್‌ ಪ್ಲಾಜಾದಲ್ಲಿ ಸ್ಥಳೀಯರಿಗೆ ನೀಡಲಾಗಿರುವ ಶುಲ್ಕ ವಿನಾಯಿತಿಯನ್ನು  ಸ್ಥಗಿತಗೊಳಿಸಿ ಶುಲ್ಕ ಹೇರಿಕೆ ಆರಂಭ ಗೊಂಡಿದ್ದು, ಸ್ಥಳೀಯರ ಹಲವು ವಾಹನಗಳಿಂದ ಈಗಾಗಲೇ ಸುಂಕ ವಸೂಲಿ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಶನಿವಾರ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ, ರಸ್ತೆ ತಡೆ ಮಾಡಲಾಯಿತು.

ಈ ಹಿಂದೆ ಹಲವು ಬಾರಿ ಪ್ರತಿಭಟನೆ ಹಾಗೂ ಮನವಿ ನೀಡಿದ ತರುವಾಯ ಸಾಸ್ತಾನ ಗುಂಡ್ಮಿಯ ಟೋಲ್ ಪ್ಲಾಝಾದಲ್ಲಿ ಸ್ಥಳೀಯರಿಗೆ ಕೆಲವಾರು ವರ್ಷಗಳಿಂದ ಶುಲ್ಕ ವಿನಾಯತಿಯಿದ್ದು ನವಯುಗ ಕಂಪೆನಿ ಟೋಲ್ ಪ್ಲಾಜಾವನ್ನು ಹೊಸ ಕಂಪೆನಿಗೆ ಮಾರಾಟ ಮಾಡಿದ್ದು ಸ್ಥಳೀಯ ವಾಹನಗಳ ಫಾಸ್ಟ್ಯಾಗ್ ಮೂಲಕ ಅನಧಿಕೃತವಾಗಿ ಶುಲ್ಕವನ್ನು ಪಡೆಯುತ್ತಿರುವುದರ ಕುರಿತು ಸ್ಥಳೀಯ ವಾಹನ ಚಾಲಕರು ಮತ್ತು ಮಾಲಕರು ಶನಿವಾರ ಶಿವಕೃಪಾ ಸಭಾಂಗಣದಲ್ಲಿ ಸಭೆ ಸೇರಿ ಟೋಲ್ ಕಂಪೆನಿಯ ವರ್ತನೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.

2016 ರಲ್ಲಿ ಗುಂಡ್ಮಿ ಟೋಲ್ ಪ್ಲಾಜಾ ಆರಂಭವಾದ ದಿನದಿಂದ ಸ್ಥಳೀಯರಿಗೆ ಶುಲ್ಕ ವಿಧಿಸದಂತೆ ಹೋರಾಟ ನಡೆಸಲು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆದು 2018ರಲ್ಲಿ ಕೋಟ ಜಿಲ್ಲಾ ಪಂಚಾಯತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಫ್ತಿಯ ಎಲ್ಲಾ ವಾಹನಗಳಿಗೆ ಸಂಪೂರ್ಣವಾಗಿ ಶುಲ್ಕ ವಿನಾಯತಿ ನೀಡಲಾಗಿತ್ತು ಆದರೆ ಇತ್ತೀಚೆಗೆ ಆಡಳಿತ ಬದಲಾವಣೆಗೊಂಡ ಬಳಿಕ ಮತ್ತೆ ಸ್ಥಳೀಯರಿಗೆ ಟೋಲ್ ವಿಧಿಸಲು ಆರಂಭಿಸಿರುವುದು ಸರಿಯಲ್ಲ. ಮತ್ತೆ ಸ್ಥಳೀಯರು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂತು. ಅಲ್ಲದೆ ಸಭೆ ಮುಗಿಸಿ ದೀಡಿರ್ ಆಗಿ ಎಲ್ಲಾ ನಾಗರಿಕರು ಟೋಲ್ ಪ್ಲಾಝಾಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡರು.

ಸುಮಾರು 500ಕ್ಕೂ ಅಧಿಕ ಸಂಖೆಯಲ್ಲಿದ್ದ ಸಾರ್ವಜನಿಕರು ಟೋಲ್ ಪ್ಲಾಜಾಕ್ಕೆ ತೆರಳಿ ಮುತ್ತಿಗೆ ಹಾಕಿ ಟೋಲ್ ಕಂಪೆನಿಯ ವಿರುದ್ದ ಘೋಷಣೆಗಳನ್ನು ಕೂಗಿದರು ಅಲ್ಲದೆ ಟೋಲ್ ರಸ್ತೆಗೆಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಬಂದ ಬ್ರಹ್ಮಾವರ ಪೊಲೀಸ್ ಇನ್ಸ್ ಪೆಕ್ಟರ್ ದಿವಾಕರ್ ಮತ್ತು ಕೋಟ ಪಿಎಸ್ ಐ ತೇಜಸ್ವಿ ಟಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಟೋಲ್ ಅಧಿಕಾರಿಗಳು ಸ್ಥಳೀಯರೊಂದಿಗೆ ಉಡಾಫೆಯನ್ನು ಪ್ರದರ್ಶಿಸುತ್ತಿದ್ದು ಈ ಹಿಂದೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ನೀಡಿದ ಶುಲ್ಕ ವಿನಾಯತಿ ಆದೇಶವನ್ನು ಉಲ್ಲಂಘಿಸಿ ಮತ್ತೆ ಟೋಲ್ ಪಡೆಯುವುದು ನಿಲ್ಲಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರು ತನಗೆ ಒಂದು ದಿನದ ಅವಧಿಯನ್ನು ನೀಡಿ ಸೋಮವಾರ ಸಂಜೆಯ ಒಳಗೆ ಟೋಲ್ ಅಧಿಕಾರಿಗಳು ಮತ್ತು ಹೋರಾಟ ಸಮಿತಿಯವರ ಸಭೆಯನ್ನು ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳವುದಾಗಿ ಮನವಿ ಮಾಡಿದರು. ಮನವಿಗೆ ಒಪ್ಪಿದ ಹೋರಾಟ ಸಮಿತಿಯ ಸದಸ್ಯರು ಸೋಮವಾರ ಸಂಜೆಯ ವರೆಗೆ ಕಾಯುವು ದಾಗಿ ಹೇಳಿದ್ದು, ಅಲ್ಲಿಯ ತನಕ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ಶುಲ್ಕ ಕಡಿತಗೊಳಿಸಬಾರದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಕೈಬಿಟ್ಟರು.

ಹೋರಾಟದಲ್ಲಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ ನಾೖರಿ, ಕಾರ್ಯದರ್ಶಿ ಅಲ್ವಿನ್‌ ಅಂದ್ರಾದೆ ಮಾಜಿ ಕಾರ್ಯದರ್ಶಿ ಐರೋಡಿ ವಿಠಲ ಪೂಜಾರಿ  ಇಬ್ರಾಹಿಂ ಸಾಹೇಬ್‌ ಕೋಟ, ನಾಗರಾಜ್‌ ಗಾಣಿಗ ಸಾಲಿಗ್ರಾಮ, ಚಂದ್ರಮೋಹನ್‌ ಪಾಂಡೇಶ್ವರ, ಸುರೇಶ್‌ ಗಿಳಿಯಾರು ಇನ್ನಿತರ ಮುಖಂಡರು ಇದ್ದರು.

 

 

 

 

Related Articles

Back to top button
error: Content is protected !!