ಇಂದು ಶಿವಮೊಗ್ಗಕ್ಕೆ ಮೋದಿ ರಣಕಹಳೆ l ಸಾರ್ವಜನಿಕ ಸಭೆ l ಬೃಹತ್ ರ್‍ಯಾಲಿ, 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರ ನಿರೀಕ್ಷೆ

Views: 58
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾ.18) ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಕರುನಾಡ ಚುನಾವಣಾ ಕಣವನ್ನು ರಂಗೇರಿಸಲಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು, ಯುವಕರು, ಮಹಿಳೆಯರು, ರೈತರು ಸೇರಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬಿಜೆಪಿ ಮುಖಂಡರು ಮತ್ತು ಜೆಡಿಎಸ್ ಮುಖಂಡರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಇರುತ್ತಾರೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾಗವಹಿಸುತ್ತಾರೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ ಮತ್ತು ಚಿಕ್ಕಮಗಳೂರಿನ ಅಭ್ಯರ್ಥಿಗಳು ವೇದಿಕೆ ಮೇಲೆ ಇರಲಿದ್ದಾರೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ, ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ, ದಾವಣಗೆರೆಯ ಸಂಸದ ಸಿದ್ದೇಶ್ವರ್, ಗಾಯತ್ರಿ ಸಿದ್ದೇಶ್ವರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವೇದಿಕೆ ಮೇಲೆ ಇರುತ್ತಾರೆ. ಮಂಗಳೂರಿನ ಅಭ್ಯರ್ಥಿ ಬೃಜೇಶ್ ಚೌಟ ಭಾಗವಹಿಸಲಿದ್ದಾರೆ.
ಬಿಗಿ ಬಂದೋಬಸ್ತ್
ಪ್ರಧಾನಿ ಮೋದಿ ಸಂಚರಿಸುವ ರಸ್ತೆಯ ಸ್ವಚ್ಛತೆ, ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗಿದ್ದು, ಅವೈಜ್ಞಾನಿಕ ಹಂಪ್ ಗಳನ್ನು ತೆರವು ಮಾಡಲಾಗಿದೆ. ಮೋದಿ ಸಂಚರಿಸುವ ಮಾರ್ಗವನ್ನು ಮೂರು ಗಂಟೆಗಳ ಕಾಲ ಬಂದ್ ಮಾಡಲಾಗುತ್ತಿದೆ. 12:30ರೊ ಒಳಗೆ ಎಲ್ಲಾ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳದಲ್ಲಿ ಸೇರಿಕೊಳ್ಳಲು ಸೂಚನೆ ನೀಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವವರಿಗೆ ಬಿಎಚ್ ರಸ್ತೆಯ ಸೈನ್ಸ್ ಮೈದಾನ ಎಪಿಎಂಸಿ ಯಾರ್ಡ್, ಬೊಮ್ಮನಕಟ್ಟೆ ಭಾಗದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.ಭದ್ರತೆಗೆ ಮೂವರು ಎಸ್ಪಿ ಐವರು ಎ ಎಸ್ ಪಿ 19 ಡಿಎಸ್ಪಿ 64 ಸಿಪಿಐ 156 ಪಿಎಸ್ಐ ಹಾಗೂ 12 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ