ಸಾಂಸ್ಕೃತಿಕ

ಒಮಾನ್ ಕನ್ನಡಿಗರ ಅನುಭವ ಕಥನಗಳ “ಅರಬ್ಬರ ನಾಡಿನಲ್ಲಿ ಕನ್ನಡಿಗರು” ಪುಸ್ತಕ ಬಿಡುಗಡೆ

Views: 16

ಒಮಾನ್ ಕನ್ನಡಿಗರ ವೇದಿಕೆ ಮತ್ತು ಛಾಯಾ ಸಾಹಿತ್ಯ ಪ್ರಕಾಶನ ವತಿಯಿಂದ ದಿನಾಂಕ ಜ.,14 ರಂದು  ಭಾನುವಾರ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಒಮಾನ್ ಕನ್ನಡಿಗ ಪಿ.ಎಸ್. ರಂಗನಾಥರವರ ಸಂಪಾದಕತ್ವದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಒಮಾನ್ ಕನ್ನಡಿಗರು ತಮ್ಮ ಅನುಭವ ಕಥನಗಳನ್ನು ದಾಖಲಿಸಿರುವ “ಅರಬ್ಬರ ನಾಡಿನಲ್ಲಿ ಕನ್ನಡಿಗರು” ಪುಸ್ತಕ ಬಿಡುಗಡೆಯಾಯಿತು.

ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಶ್ರೀ ಮಲ್ಲೇಪುರಂ ಜಿ ವೆಂಕಟೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಪುಸ್ತಕದ ಕುರಿತು ವಿಷಯಗಳನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದರು. ತುಮಕೂರಿನ ರಾಮಕೃಷ್ಣ – ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶಿರ್ವಚನ ನೀಡಿದರು. ಅನಿವಾಸಿ ಭಾರತೀಯ ಕೋಶ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅನಿವಾಸಿ ಕನ್ನಡಿಗರ ಕುರಿತು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ. ಶ್ರೀ ಮಹೇಶ್ ಜೋಷಿಯವರು ಕೃತಿಯನ್ನು ಲೋಕಾರ್ಪಣೆ ಮಾಡಿದರು. ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಭಟ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ತಾವು ಕಂಡ ಒಮಾನ್ ದೇಶದ ಕುರಿತಾಗಿ ಮಾತನಾಡಿದರು ಮತ್ತು ಅಲ್ಲಿ ವಾಸಿಸುತ್ತಿರುವ ಕನ್ನಡಿಗರ ಕನ್ನಡಪ್ರೇಮದ ಕುರಿತು ಪ್ರಶಂಸಿದರು. ಇಪ್ಪತ್ತಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರು, ತಮ್ಮ ವಿದೇಶಿ ಬದುಕಿನ ಕುರಿತು ಕನ್ನಡಿಗ ಓದುಗರಿಗೆ ಪರಿಚಯಿಸಿದ ಮೊದಲ ಕೃತಿ ಇದಾಗಿದೆ ಎಂದು ಎಲ್ಲ ಗಣ್ಯರು ಶ್ಲಾಘಿಸಿದರು.

ಬ್ರಾಹ್ಮಿನ್ಸ್ ಕೆಫೆಯ ರಾಧಾಕೃಷ್ಣ ಅಡಿಗರು, ಅಬಕಾರಿ ಮತ್ತು ಸುಂಕ ಇಲಾಖೆಯ ನಿವೃತ್ತ ಅಧಿಕಾರಿಗಳಾದ ಶ್ರೀ ಡಾ. ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಶ್ರೀ ಶಿವಕುಮಾರ್ ನಾಗರನವಿಲೆ ಯವರು ವಿಶೇಷ ಅಥಿತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಲ್ಲ ಗಣ್ಯಾತಿಗಣ್ಯರಿಗೆ ಒಮಾನ್ ಕನ್ನಡಿಗರ ವೇದಿಕೆ ವತಿಯಿಂದ ಗೌರವ ಸಮರ್ಪಿಸಲಾಯಿತು. ಹಾಗೆಯೇ ಒಮಾನ್ ನಲ್ಲಿ ಸಾಧನೆಗೈದಿರುವ ಕನ್ನಡಿಗರು ಮತ್ತು ಕನ್ನಡ ಸಂಘ ಸಂಸ್ಥೆಗಳಲ್ಲಿ ಸೇವೆಸಲ್ಲಿಸಿದವರನ್ನು ಸನ್ಮಾನಿಸಲಾಯಿತು. ಆಡಿಟಿಂಗ್ ಅಕೌಂಟಿಗ್ ವೃತ್ತಿಯಲ್ಲಿ ಅದ್ಭುತ ಸಾಧನೆಗೈಯುತ್ತಿರುವ ಸಿ.ಎ ಶ್ರೀ ರಮಾನಂದ ಪ್ರಭು, ಖ್ಯಾತ ಹೃದಯ ರೋಗ ತಜ್ನರಾಗಿರುವ ಹಾಗು ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವ ಡಾ. ಜಿ.ಬಿ ನಾಗರಾಜು, ಮಸ್ಕತ್ ಕನ್ನಡ ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ರಾಮಚಂದ್ರ ರಾವ್, ಶ್ರೀ ಜಾನಕೀನಾಥ್, ಶ್ರೀ ಕರುಣಾಕರ್ ರಾವ್, ಸ್ಪಂದನ ಮತ್ತಿತರ ಸಂಘ ಸಂಸ್ಥೆಗಳ ಮುಖಾಂತರ ಸೇವೆ ಸಲ್ಲಿಸಿದ ಶ್ರೀ ಕೋಣಿ ಪ್ರಕಾಶ್ ನಾಯಕ್ ಅವರನ್ನು ಒಮಾನ್ ಕನ್ನಡಿಗರ ವೇದಿಕೆ ಮುಖಾಂತರ ಸನ್ಮಾನಿಸಲಾಯಿತು.

ಸ್ಪೂರ್ತಿ ನೃತ್ಯ ಶಾಲೆ ವತಿಯಿಂದ ಭರತನಾಟ್ಯವನ್ನು ಪ್ರಸ್ತುತ ಪಡಿಸಲಾಯಿತು. ಪ್ರತಿಭಾವಂತ ಒಮಾನ್ ಕನ್ನಡಿಗರಿಂದ, ಪ್ರಾರ್ಥನೆ, ನಾಡಗೀತೆ ಮತ್ತು ಭಾವಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ನೂರಾರು ಜನರಿಂದ ಕಾರ್ಯಕ್ರಮವನ್ನು ವೀಕ್ಷಿಸಿದರು, ಈ ಕಾರ್ಯಕ್ರಮಕ್ಕಾಗಿಯೇ, ಒಮಾನ್ ಮತ್ತು ಸೌದಿ ಅರೇಬಿಯಾದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಆಗಮಿಸಿದ್ದುದು ವಿಶೇಷವಾಗಿತ್ತು. ಹಾಡು, ನೃತ್ಯ, ಸಾಹಿತ್ಯದ ಕುರಿತು ಚರ್ಚೆ, ಒಮಾನ್ ರಾಷ್ಟ್ರದ ಅನುಭವದ ಕುರಿತು ಮಾತುಗಳು ಹೀಗೆ ವಿವಿಧ ವಿಶೇಷ ಸಂಗತಿಗಳಿಂದ ಎಲ್ಲೂ ಕೊರತೆಯಾಗದಂತೆ ಮತ್ತು ಯಾವುದೇ ಲೋಪದೋಷಗಳಿಲ್ಲದೆ, ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮತ್ತು ಯಶಸ್ವಿಯಾಗಿ ಮೂಡಿ ಬಂತು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ಮತ್ತು ಸಭಿಕರಿಂದ ಪ್ರಶಂಸೆಯ ಮಾತುಗಳು ಕೇಳಿಬಂದವು.

ರಂಗನಾಥ ರವರು ಕಳೆದ 14 ವರ್ಷಗಳಿಂದ ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ನಲ್ಲಿ ನೆಲೆಸಿ ಉದ್ಯೋಗ ಮಾಡುತಿದ್ದಾರೆ, ಅದಕ್ಕೂ ಮುಂಚೆ ದುಬೈ ಮತ್ತು ಕುವೈತ್ ನಲ್ಲಿ 4 ವರ್ಷಗಳ ಕಾಲ ನೆಲೆಸಿದ್ದರು. ಕಳೆದ ಒಂದೂವರೆ ದಶಕಕ್ಕಿಂತಲೂ ಹೆಚ್ಚಿನ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವುದರಿಂದ ಇಲ್ಲಿನ ಜೀವನ ಶೈಲಿ, ಕನ್ನಡ ಸಂಸ್ಕೃತಿ, ಆಧ್ಯಾತ್ಮ, ಸಾಂಸ್ಕೃತಿಕ, ಉದ್ಯೋಗ, ಬದುಕು, ಬವಣೆ ಇತ್ಯಾದಿ ವಿಷಯಗಳ ಕುರಿತು ಸಂಪೂರ್ಣ ಚಿತ್ರಣವನ್ನು ಪುಸ್ತಕದ ರೂಪದಲ್ಲಿ ಕಟ್ಟಿಕೊಡುವ ಆಲೋಚನೆಯಿಂದ ಈ ಕೃತಿಯನ್ನು ರಚಿಸಿದ್ದಾರೆ.

ಈ ಪುಸ್ತಕದಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಬರಹಗಾರರ ತಮ್ಮ ಸ್ವಂತ ಅನುಭವದ ಜತೆಗೆ ಒಮಾನ್ ನಲ್ಲಿ ನಡೆದ ಮತ್ತು ಕೇಳಿದ ಹಲವಾರು ಕುತೂಹಲಕಾರಿ ವಿಷಯಗಳು ಮತ್ತು ಸ್ಪೂರ್ತಿದಾಯಕ ಲೇಖನಗಳು ಇಲ್ಲಿ ದಾಖಲಾಗಿವೆ. ಈ ಪುಸ್ತಕದ ಮೂಲಕ ಕನ್ನಡಿಗ ಓದುಗರಿಗೆ ಒಮಾನ್ ನಲ್ಲಿನ ಇವರೆಲ್ಲರ ಬದುಕು, ಬವಣೆ, ಖುಷಿ ವಿಚಾರ ಇತ್ಯಾದಿಗಳನ್ನ ಪರಿಚಯಿಸುವ ವಿಭಿನ್ನ ಪ್ರಯತ್ನವನ್ನು ಮಾಡಿದ್ದಾರೆ. ಒಮಾನ್ ನಲ್ಲಿ ನೆಲೆಸಿ ಕನ್ನಡ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವ ಸಂಘಟನೆಗಳು, ಕತೆ, ಕವನ ಲೇಖನಗಳನ್ನ ಬರೆಯುತ್ತಿರುವ ಬರಹಗಾರರು, ಕನ್ನಡದ ಸಾಧಕರು ಮತ್ತು ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರು ಇವರೆಲ್ಲರ ಪರಿಚಯ ಹೀಗೆ ವಿವಿಧ ವಿಷಯಗಳನ್ನು ಪ್ರಸ್ತುತ ಪಡಿಸುವ ಪ್ರಯತ್ನವನ್ನು ಸಂಪಾದಕರು ಮಾಡಿದ್ದಾರೆ.

Related Articles

Back to top button
error: Content is protected !!