ಹೋಂ ಸ್ಟೇನಲ್ಲಿ ಯುವತಿ ಅನುಮಾನಾಸ್ಪದ ಸಾವು: ಮಾಲೀಕನ ವಿರುದ್ಧ ಎಫ್‌ಐಆರ್
Views: 0
ಕನ್ನಡ ಕರಾವಳಿ ಸುದ್ದಿ: ಆಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೋಂ ಸ್ಟೇಯೊಂದರಲ್ಲಿ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 4 ತಿಂಗಳ ನಂತರ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ.
ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ರಂಜಿತಾ 2025ರ ಅ. 25ರಂದು ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದಿದ್ದಳು. ಅದೇ ದಿನ ಹೋಂ ಸ್ಟೇ ಬಾತ್‌ರೂಮ್‌ನಲ್ಲಿ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಯುವತಿ ಸಾವಿನ ಸತ್ಯಾಂಶ ಬಹಿರಂಗವಾಗಿದ್ದು, ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೆಡ್ ಅನಿಲ ಸೋರಿಕೆಯಿಂದ ಸಾವು ದೃಢಪಟ್ಟಿದೆ. ಈ ಹಿನ್ನೆಲೆ ಸರಿಯಾದ ವೆಂಟಿಲೇಶನ್ ವ್ಯವಸ್ಥೆ ಇಲ್ಲದಿದ್ದದ್ದೇ ದುರಂತಕ್ಕೆ ಕಾರಣ ಎಂದು ಹೋಂ ಸ್ಟೇ ಮಾಲೀಕ ಸುಧಾಕರ್ ವಿರುದ್ಧ ಎಫ್‌ಐಆರ್ ಅನ್ನು ದಾಖಲು ಮಾಡಲಾಗಿದೆ.
ಹೋಂ ಸ್ಟೇ ಮಾಲೀಕರ ನಿರ್ಲಕ್ಷ್ಯವೇ ಯುವತಿಯ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಆಲ್ಲೂರು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.






