ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ‘ಕರ್ನಾಟಕಕ್ಕೆ 50 ರ ಸಂಭ್ರಮ’

Views: 54
ಬೆಂಗಳೂರು: ಕನ್ನಡ ಭಾಷಿಕರು, ಪ್ರದೇಶ ಏಕೀಕರಣವಾದ ರಾಜ್ಯೋತ್ಸವ ಸಡಗರ ಹಾಗೂ ಕರ್ನಾಟಕ ಎಂಬ ಮರು ನಾಮಕರಣವಾಗಿ 50ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಸುವರ್ಣ ಸಂಭ್ರಮ ಈ ಬಾರಿ ಮೇಳೈಸಿವೆ.
ಕನ್ನಡ ನಾಡು, ನುಡಿ, ಪರಂಪರೆ, ಸಂಸ್ಕೃತಿಯ ಹಿರಿಮೆ-ಗರಿಮೆ ಉಲ್ಲಾಸದಲ್ಲಿ ಜನರ ಮಿಂದೇಳುವ ಈ ಸುಸಂದರ್ಭವನ್ನು ಸರ್ಕಾರ ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿದ್ದು, ಸಂಘ-ಸಂಸ್ಥೆಗಳು ಅಷ್ಟೇ ಉತ್ಸಾಹದಿಂದ ಸನ್ನದ್ಧವಾಗಿವೆ.
‘ಕರ್ನಾಟಕ ಸುವರ್ಣ ಸಂಭ್ರಮ’ ವರ್ಷಪೂರ್ತಿ ಆಚರಿಸಲು ಕಾರ್ಯಕ್ರಮದ ನೀಲನಕ್ಷೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲ ದಿನವಾದ ಬುಧವಾರ ಜನರ ಮನ-ಮನೆ ಹಬ್ಬವಾಗಿಸಲು ಮಾರ್ಗಸೂಚಿ ಹಾಕಿಕೊಟ್ಟಿದ್ದು, ರಾಜ್ಯಾದ್ಯಂತ ಸಂಚರಿಸಲಿರುವ ಜ್ಯೋತಿ ರಥಯಾತ್ರೆಗೆ ನ.2ರ ಸಂಜೆ ಹಂಪಿಯನ್ನು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮ
ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಕಾರ್ಯಕ್ರಮಗಳು ನಡೆಯಲಿವೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ 68 ಸಾಧಕರು ಮತ್ತು 10 ಸಂಘ-ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರದಾನ ಸಮಾರಂಭ ಬುಧವಾರ ಸಂಜೆ ಏರ್ಪಡಿಸಲಾಗಿದೆ.
– ಎಲ್ಲರ ಮನಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ, ‘ಕರ್ನಾಟಕ ಸಂಭ್ರಮ-50: ಉಸಿರಾಯಿತು ಕರ್ನಾಟಕ ಹೆಸರಾಗಲಿ ಕರ್ನಾಟಕ ಎನ್ನುವ ೋಷವಾಕ್ಯ ಬರೆಯುವುದು.
– ಬೆಳಗ್ಗೆ 9ಕ್ಕೆ ಬಾನುಲಿಯಲ್ಲಿ ನಾಡಗೀತೆ ಮೊಳಗಲಿದೆ. ರಾಷ್ಟ್ರಗೀತೆಗೆ ಗೌರವ ಅರ್ಪಿಸುವ ಹಾಗೆ ಎಲ್ಲರೂ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ
– ಎಲ್ಲ ಜಿಲ್ಲಾ, ತಾಲೂಕು, ಗ್ರಾ.ಪಂ. ಕೇಂದ್ರಗಳಲ್ಲಿ ರಾಷ್ಟ್ರ ಧ್ವಜಾರೋಹಣ, ರಾಷ್ಟ್ರ ಗೀತೆ, ನಾಡಗೀತೆ, ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ.
– ಹುಯಿಲಗೋಳ ನಾರಾಯಣ ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಕುವೆಂಪು ಅವರ ‘ಎಲ್ಲಾದರು ಇರು ಎಂದಾದರು ಇರು’, ದ.ರಾ.ಬೇಂದ್ರೆಯವರ ‘ ಒಂದೇ ಒಂದೇ ಕರ್ನಾಟಕ ಒಂದೇ’, ಸಿದ್ದಯ್ಯ ಪುರಾಣಿಕರ ‘ ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ಮತ್ತು ಚನ್ನವೀರ ಕಣವಿಯವರ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ
– ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳು, ಸರ್ಕಾರಿ, ಅರೆಸರ್ಕಾರಿ, ನಿಗಮ-ಮಂಡಳಿಗಳ ಕಚೇರಿಗಳು, ಬ್ಯಾಂಕ್ಗಳು ಹಾಗೂ ಸಂಘ-ಸಂಸ್ಥೆಗಳು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮಗಳ ವೇಳಾಪಟ್ಟಿಯಲ್ಲಿ ಅಳವಡಿಸಿಕೊಂಡು ಐದು ಗೀತೆಗಳನ್ನು ಹಾಡುವುದು ಕಡ್ಡಾಯ
– ಸಂಜೆ 5ಕ್ಕೆ ಆಯಾ ಊರಿನ ಮೈದಾನಗಳಲ್ಲಿ ಕೆಂಪು-ಹಳದಿ ಬಣ್ಣದ ಗಾಳಿಪಟವನ್ನು ಬಾನೆತ್ತರಕ್ಕೆ ಹಾರಿಸುವುದು.
– ರಾತ್ರಿ 7ಕ್ಕೆ ಪ್ರತಿಯೊಬ್ಬರ ಮನೆ, ಕಚೇರಿ, ಅಂಗಡಿ ಮಳಿಗೆಗಳ ಮುಂದೆ ಹಣತೆಯಲ್ಲಿ ಕನ್ನಡ ಜ್ಯೋತಿ ಬೆಳಗಿಸುವುದು.
– ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಗಂಗಾ ಜಲಾಭಿಷೇಕ, ಭುವನೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ಸಿಎಂ ಸಿದ್ದರಾಮಯ್ಯ, ಸಚಿವರು, ಗಣ್ಯರು ಭಾಗಿ. ಜಾನಪದ ಕಲಾತಂಡಗಳಿಂದ ರಥಬೀದಿಯಲ್ಲಿ ಮೆರವಣಿಗೆ, ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ, ಎದುರು ಬಸವಣ್ಣ ಮಂಟಪದ ಮುಂದೆ ‘ಕನ್ನಡಜ್ಯೋತಿ ರಥಯಾತ್ರೆ’ಗೆ ಚಾಲನೆ
– ರಾಜ್ಯಾದ್ಯಂತ ಎಲ್ಲ ಶಾಲೆ, ಕಾಲೇಜುಗಳಲ್ಲಿ ಭಾಷೆ, ನನ್ನ ಹಾಡು, ಪ್ರಬಂಧ, ರಸಪ್ರಶ್ನೆ, ಭಾಷಣ ಸ್ಪರ್ಧೆಗಳು ವಲಯ, ತಾಲೂಕು, ಜಿಲ್ಲಾ, ನಾಲ್ಕು ಕಂದಾಯ ವಿಭಾಗ ಮತ್ತು ರಾಜ್ಯಮಟ್ಟದಲ್ಲಿ ಆಯೋಜನೆ






