ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಾದರೆ ಸಂಪುಟದಿಂದ ಹೊರಗುಳಿಯುವೆ: ಹೈಕಮಾಂಡ್ಗೆ ಡಿಕೆಶಿ ಸಂದೇಶ

Views: 79
ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೆ ಹೊಸದಾಗಿ ಮೂವರು ಉಪಮುಖ್ಯಮಂತ್ರಿಗಳ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಸಚಿವರುಗಳಾದ ಸತೀಶ್ ಜಾರಕಿಹೊಳಿ, ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಡಾ. ಹೆಚ್.ಸಿ. ಮಹದೇವಪ್ಪ, ದಿನೇಶ್ಗುಂಡೂರಾವ್, ಕೆ.ಹೆಚ್. ಮುನಿಯಪ್ಪ, ಎಂ.ಬಿ ಪಾಟೀಲ್ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನಿನ್ನೆ ಬೆಂಗಳೂರಿಗೆ ಬಂದಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆ ಇಟ್ಟಿರುವ ಬೆನ್ನಲ್ಲೆ ಡಿ.ಕೆ. ಶಿವಕುಮಾರ್ ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಹೊಸದಾಗಿ ಮೂವರು ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಸುವುದನ್ನು ಬಲವಾಗಿ ವಿರೋಧಿಸಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹೆಚ್ಚುವರಿ ಉಪಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯಾದರೆ ಸಂಪುಟದಿಂದ ಹೊರಗುಳಿಯುವ ಸಂದೇಶವನ್ನು ಹೈಕಮಾಂಡ್ಗೆ ರವಾನಿಸಿದ್ದಾರೆ.
ನಿನ್ನೆ ರಾತ್ರಿ 7 ಸಚಿವರುಗಳ ತಂಡ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಪಟ್ಟು ಹಾಕಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಜತೆ ದೂರವಾಣಿಯಲ್ಲಿ ಮಾತನಾಡಿ ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ತಮ್ಮ ವಿರೋಧವಿದೆ. ಹಾಗೇನಾದರೂ ಆದರೆ ನಾವು ಸಂಪುಟದಿಂದಲೇ ಹೊರಗುಳಿದು ಕೆಪಿಸಿಸಿ ಅಧ್ಯಕ್ಷನಾಗಿ ಮಾತ್ರ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಈ ನಿಲುವು ಕಾಂಗ್ರೆಸ್ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಂದೆಡೆ ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಬೇಕು ಎಂಬ ಸಚಿವರ ಒತ್ತಡ, ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಅವರ ವಿರೋಧ ಹೈಕಮಾಂಡ್ನ್ನು ಅಡಕತ್ತರಿಗೆ ಸಿಲುಕಿಸಿದಂತಾಗಿದ್ದು, ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಸಂದಿಗ್ಧದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಲುಕಿದೆ.
ಲೋಕಸಭಾ ಚುನಾವಣೆಗೆ ಮುನ್ನವೇ ಮೂವರು ಡಿಸಿಎಂಗಳ ಸೃಷ್ಟಿಯಾದರೆ ಅದು ಪಕ್ಷಕ್ಕೆ ಅನುಕೂಲ ಎಂದು ಕೆಲ ಸಚಿವರುಗಳು ಹೈಕಮಾಂಡ್ನ ಮನವೊಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವರುಗಳು ಡಿಸಿಎಂ ಹುದ್ದೆಯ ಸೃಷ್ಟಿಗೆ ಒತ್ತಡ ಹೇರಿರುವುದು ಕಾಂಗ್ರೆಸ್ನಲ್ಲಿ ಬಣ ರಾಜಕೀಯ ತೀವ್ರವಾಗಿರುವುದರ ಸೂಚನೆ ಎಂದು ಹೇಳಲಾಗಿದೆ.
ಶತಾಯಗತಾಯ ಡಿ.ಕೆ. ಶಿವಕುಮಾರ್ ಅವರಿಗೆ ಕಡಿವಾಣ ಹಾಕಲು ಡಿಸಿಎಂ ಹುದ್ದೆಗಳ ಸೃಷ್ಟಿಯ ತಂತ್ರ ಎಣೆಯಲಾಗಿದೆ. ಹೊಸದಾಗಿ ಮೂವರು ಡಿಸಿಎಂಗಳಾದರೆ ತಾನೇ ತಾನಾಗಿಯೇ ಸರ್ಕಾರದ ಮಟ್ಟದಲ್ಲಿ ಡಿ.ಕೆ.ಶಿವಕುಮಾರ್ ಪ್ರಭಾವ ತಗ್ಗುತ್ತದೆ ಎಂಬುದು ಹೊಸ ಡಿಸಿಎಂ ಸೃಷ್ಟಿಯ ಹಿಂದಿನ ಲೆಕ್ಕಾಚಾರವಾಗಿದೆ. ಇದೆಲ್ಲವನ್ನು ಅರಿತಿರುವ ಡಿ.ಕೆ. ಶಿವಕುಮಾರ್ ಇದಕ್ಕೆ ಪ್ರತಿತಂತ್ರ ಎಣೆಯುತ್ತಿದ್ದು, ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವ ಬಳಸಿಕೊಂಡು ಹೊಸ ಡಿಸಿಎಂ ಹುದ್ದೆಗಳು ಸೃಷ್ಟಿಯಾಗದಂತೆ ತನ್ನದೇ ಆದ ರಾಜಕೀಯ ದಾಳ ಉರುಳಿಸಿದ್ದಾರೆ.
ಹೈಕಮಾಂಡ್ ಒಂದು ವೇಳೆ ಹೊಸ ಡಿಸಿಎಂಗಳನ್ನು ಮಾಡಿದರೆ ಯಾವುದೇ ಕಾರಣಕ್ಕೂ ತಾವು ಸಂಪುಟದಲ್ಲಿ ಉಳಿಯುವುದಿಲ್ಲ. ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಅಧ್ಯಕ್ಷನಾಗಿ ಲೋಕಸಭಾಚುವಣೆಯಲ್ಲಿ ಸಕ್ರಿಯನಾಗಿ ಭಾಗಿಯಾಗಿ ಪಕ್ಷವನ್ನು ಗೆಲ್ಲಿಸುವತ್ತ ಗಮನಹರಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ವರಿಷ್ಠರಿಗೆ ಹೇಳಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ವರಿಷ್ಠರ ಮಟ್ಟದಲ್ಲೇ ಮೂರು ಡಿಸಿಎಂ ಸೃಷ್ಟಿಗೆ ತಡೆಹಾಕಿ ತಮಗೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಣಕ್ಕೆ ತಿರುಗೇಟು ನೀಡುವ ತಂತ್ರವನ್ನು ಡಿಕೆಶಿ ರೂಪಿಸಿ, ಆ ಮೂಲಕ ಮೂವರು ಡಿಸಿಎಂಗಳ ಸೃಷ್ಟಿಗೆ ನಡೆದಿರುವ ಪ್ರಯತ್ನಗಳಿಗೆ ಅಂಕುಶ ಹಾಕುವ ಪ್ರತಿ ತಂತ್ರವನ್ನು ನಡೆಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು, ಹೊಸ ಸರ್ಕಾರ ರಚನೆ ಸಂದರ್ಭದಲ್ಲಿ ಸಿದ್ಧರಾಮಯ್ಯ ಜತೆ ಮುಖ್ಯಮಂತ್ರಿ ಹುದ್ದೆ ರೇಸ್ನಲ್ಲಿದ್ದ ಡಿ.ಕೆ. ಶಿವಕುಮಾರ್ ಅವರನ್ನು ವರಿಷ್ಠರು ಸಮಾಧಾನ ಮಾಡಿ ಸದ್ಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ಒಪ್ಪಿಕೊಳ್ಳಿ ಸಿದ್ಧರಾಮಯ್ಯರವರನ್ನು ಸಿಎಂ ಮಾಡೋಣ. ನಿಮ್ಮ ಪಕ್ಷ ನಿಷ್ಠೆಗೆ ಮುಂದೆ ಅವಕಾಶ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ರವರಿಗೆ ಹೇಳಿ, ಉಪಮುಖ್ಯಮಂತ್ರಿ ಹುದ್ದೆ ಒಪ್ಪಿಕೊಳ್ಳಲು ಅವರ ಮನವೊಲಿಸಿದ್ದರು.
ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ ನನ್ನೊಬ್ಬನನ್ನೇ ಮಾಡಬೇಕು. ಬೇರೆಯವರನ್ನು ಮಾಡಿದರೆ ನಾನು ಉಪಮುಖ್ಯಮಂತ್ರಿ ಆಗಲ್ಲ ಎಂದು ವರಿಷ್ಠರಿಗೆ ನೇರವಾಗಿ ಹೇಳಿದ್ದರು. ಇದಕ್ಕೆ ವರಿಷ್ಠರು ಅಸ್ತು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಮಾತ್ರ ಉಪಮುಖ್ಯಮಂತ್ರಿ ಮಾಡಿದ್ದರು. ಆಗ ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದರಾದರೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಒಪ್ಪಿಕೊಂಡು ಸುಮ್ಮನಾಗಿದ್ದರು.
ಹೊಸ ಸರ್ಕಾರ ರಚನೆ ಸಂದರ್ಭದಲ್ಲಿ ತಗಾದೆ, ಅಪಸ್ವರ ತೆಗೆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಈ ಎಲ್ಲ ಸಚಿವರುಗಳು ಹೈಕಮಾಂಡ್ ತೀರ್ಮಾನವನ್ನು ಒಪ್ಪಿಕೊಂಡಿದ್ದರು. ಸರ್ಕಾರಕ್ಕೆ ಆರು ತಿಂಗಳು ತುಂಬುತ್ತಿದ್ದಂತೆಯೇ ಮತ್ತೆ ಡಿಸಿಎಂ ಹುದ್ದೆಗಾಗಿ ಲಾಬಿ ಆರಂಭವಾಗಿ ಕೆಲ ದಿನಗಳಿಂದ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಸಚಿವರು ಭೋಜನ ಕೂಟ ನೆಪದಲ್ಲಿ ರಹಸ್ಯ ಸಭೆಗಳನ್ನು ನಡೆಸಿದ್ದರು.
ಈ ಮೂವರು ಹೊಸ ಡಿಸಿಎಂ ಸೃಷ್ಟಿಗೆ ಇರುವ ಒತ್ತಡ, ಇದಕ್ಕೆ ಶಿವಕುಮಾರ್ ಅವರ ವಿರೋಧ ಈ ಎಲ್ಲವೂ ಹೈಕಮಾಂಡ್ ನಾಯಕರಿಗೆ ತಲೆ ನೋವು ತಂದಿದೆ.






