ಹುಲಿ ವೇಷ ಕುಣಿತ ತಂಡದ ಮುಖ್ಯಸ್ಥನ ಬರ್ಬರ ಕೊಲೆ: ಆರೋಪಿಗಳು ಪೊಲೀಸ್ ವಶಕ್ಕೆ

Views: 0
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪ್ರಖ್ಯಾತ ಹುಲಿ ವೇಷ ಕುಣಿತ ತಂಡ ಟೈಗರ್ಸ್ ಕಲ್ಲೇಗ ತಂಡದ ಸದಸ್ಯ ಅಕ್ಷಯ್ ಕಲ್ಲೇಗ ಅವರನ್ನು ತಡ ರಾತ್ರಿ ದುಷ್ಕರ್ಮಿಗಳ ತಂಡ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದೆ.
ಪುತ್ತೂರು ಪೇಟೆ ಹೊರ ವಲಯದ ನೆಹರು ನಗರದಲ್ಲಿ ಘಟನೆ ನಡೆದಿದ್ದು, ಅಪಘಾತಕ್ಕೆ ಸಂಬಂಧಿಸಿ ಪೋನ್‌ನಲ್ಲಿ ಮಾತಿನ ಚಕಮಕಿ ನಡೆದು ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.
ಸಂಜೆ ವೇಳೆ ವಾಹನ ಅಪಘಾತದ ವಿಚಾರದಲ್ಲಿ ಅಕ್ಷಯ್ ಹಾಗೂ ಎದುರಾಳಿ ತಂಡದ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದರ ನಷ್ಟದ ವಿಚಾರಕ್ಕೆ ಮಾತುಕತೆಗೆ ದುಷ್ಕರ್ಮಿಗಳ ತಂಡ ಅಕ್ಷಯ್‌ನನ್ನು ರಾತ್ರಿ ವೇಳೆ ನೆಹರೂ ನಗರದ ಬಳಿ ಕರೆದು ಕೊಲೆ ನಡೆಸಿದೆ.
ಅಕ್ಷಯ್ ಮೃತದೇಹ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಹೆದ್ದಾರಿಯ ಅಂಚಿನ ಜಾಗದಲ್ಲಿ ಬಿದ್ದು ಕೊಂಡಿತ್ತು. ಒಟ್ಟು ಮೂವರಿದ್ದ ತಂಡ ಕೃತ್ಯ ಎಸಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಕೊಲೆ ಬಳಿಕ ಮನೀಶ್ ಹಾಗೂ ಚೇತು ಎಂಬವರು ಪೊಲೀಸರಿಗೆ ಶರಣಾಗಿದ್ದಾರೆ. ಇನ್ನೋರ್ವ ಆರೋಪಿ ಮಂಜುನಾಥ್‌ನನ್ನು ಇಂದು ಪೊಲೀಸರು ಬಂಧಿಸಿದ್ದಾರೆ.
ಅಕ್ಷಯ್ ಸ್ನೇಹಿತ ವಿಖ್ಯಾತ್ ಈ ಕುರಿತು ಮನೀಶ್, ಚೇತು, ಮಂಜುನಾಥ್ ಹಾಗೂ ಕೇಶವ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.