ಹುತಾತ್ಮ ಯೋಧ ಅನೂಪ್ ಪೂಜಾರಿಗೆ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

Views: 219
ಕುಂದಾಪುರ:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರ ವಾಹನ ಕಣಿವೆಗೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹುತಾತ್ಮರಾದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಯೋಧ ಅನೂಪ್ ಪೂಜಾರಿ (33) ಪಾರ್ಥಿವ ಶರೀರವನ್ನು ವಿಮಾನ ಮೂಲಕ ಇಂದು (ಡಿ.26) ಮುಂಜಾನೆ ಮಂಗಳೂರಿಗೆ ತರಲಾಗಿದ್ದು, ಬಳಿಕ ಅದನ್ನು ಆಂಬುಲೆನ್ಸ್ ವಾಹನದಲ್ಲಿ ಉಡುಪಿ ಮೂಲಕ ಕುಂದಾಪುರದ ಬೀಜಾಡಿಗೆ ತರಲಾಯಿತು.
ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣಕ್ಕೆ ಭೇಟಿ, ಸೇನಾ ವಿಮಾನದಿಂದ ಪಾರ್ಥೀವ ಶರೀರವನ್ನು ಹೊರಗೆ ತೆಗೆಯುವ ವೇಳೆ ಶವ ಪಟ್ಟಿಗೆಗೆ ಹೆಗಲು ನೀಡಿದರು. ಮಾಜಿ ಯೋಧರೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರೂ ಸೇನಾ ಸಿಬಂದಿಗಳಿಗೆ ಜತೆಯಾದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜತೆಗಿದ್ದರು. ಬಳಿಕ ಅಂತಿಮ ನಮನ ಸಲ್ಲಿಸಿದರು. ಇಂದು (ಡಿ.26) ಬೆಳಗ್ಗೆ 9ಕ್ಕೆ ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ತಂದು ಅವರ ಹುಟ್ಟೂರಾದ ಬೀಜಾಡಿಗೆ ಮೆರವಣಿಗೆ ಮೂಲಕ ತರಲಾಗಿದೆ. ಈ ವೇಳೆ ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ಮನೆಯಲ್ಲಿ ಸಕಲ ವಿಧಿ ವಿಧಾನಗಳನ್ನು ನೆರವೇರಿಸಿ, ಅಂತಿಮ ಸಂಸ್ಕಾರಕ್ಕೆ ಮೊದಲು ಬೀಜಾಡಿ ಪಡು ಶಾಲೆಯ ಆವರಣದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ.
ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಅವರು ಕಲಿತ ಬೀಜಾಡಿ ಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಪ್ತರು, ಸಾರ್ವಜನಿಕರು, ಶಾಲಾ ಮಕ್ಕಳು, ಅಧಿಕಾರಿಗಳು, ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.
ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಅನೂಪ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅವರ ಅಂತ್ಯಸಂಸ್ಕಾರ ನಡೆಯಿತು. ಅನೂಪ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಅಂತಿಮ ವಿಧಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೇನಾ ಸಿಬ್ಬಂದಿ ಭಾಗಿಯಾಗಿದ್ದರು. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.