ಹಿರಿಯ ನಟ ಎಂಎಸ್ ಉಮೇಶ್ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

Views: 54
ಕನ್ನಡ ಕರಾವಳಿ ಸುದ್ದಿ: ಕನ್ನಡ ಚಿತ್ರರಂಗಕ್ಕೆ ಈಗ 91 ವರ್ಷ. ಈ 91 ವರ್ಷದಲ್ಲಿ ಹಲವರು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಬದುಕನ್ನೇ ಕಲಾಸೇವೆಗೆ ಮುಡಿಪಾಗಿಟ್ಟಿದ್ದಾರೆ. ಆ ಪೈಕಿ ಒಬ್ಬರು ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್.ಉಮೇಶ್. ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ಕಲಾವಿದರಾದ ಎಂ.ಎಸ್.ಉಮೇಶ್ ಕಿರುತೆರೆಯಲ್ಲೂ ಜನಪ್ರಿಯರು.
ಎಳೆಯ ವಯಸ್ಸಿನಲ್ಲಿಯೇ ಕಂಪನಿ ನಾಟಕಗಳಲ್ಲಿ ಬಾಲ ಕಲಾವಿದರಾಗಿ ಅಭಿನಯಿಸುತ್ತಿದ್ದ ಉಮೇಶ್ ಚಲನಚಿತ್ರ ರಂಗಕ್ಕೆ ಅಡಿಯಿಟ್ಟಿದ್ದು ‘ಮಕ್ಕಳ ರಾಜ್ಯ’ ಚಿತ್ರದ ಮೂಲಕ. ಆ ಕಾಲದಲ್ಲಿಯೇ ಪರಭಾಷೆಗಳಿಂದ ಅವಕಾಶ ಅರಸಿ ಬಂದರೂ ಕೂಡ ಹೋಗದೇ ಕನ್ನಡ ಚಿತ್ರರಂಗದಲ್ಲಿಯೇ ಮುಂದುವರೆದ ಎಂಎಸ್ ಉಮೇಶ್ ಇಲ್ಲಿಯವರೆಗೆ ಹತ್ತು ಹಲವು ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ.
ಇನ್ನು ”ಗೋಲ್ ಮಾಲ್ ರಾಧಾಕೃಷ್ಣ” ಚಿತ್ರದಲ್ಲಿನ ಇವರ ಡೈಲಾಗ್ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದೆ. “ಅಯ್ಯೋ ನನ್ನ ಹೆಂಡ್ತಿ ಅಂದುಕೊಂಡು ನಿಮ್ಮ ಹೆಂಡ್ತೀನಾ ತಬ್ಬುಕೊಂಡು ಬಿಟ್ಟೆನಲ್ಲಾ. ಅಪಾರ್ಥ ಮಾಡ್ಕೋಬೇಡಿ…” ಎಂಬ ಡೈಲಾಗ್ ಉಮೇಶ್ ಅವರನ್ನು ನೋಡಿದರೆ ನೆನಪಾಗುತ್ತದೆ.
ವರನಟ ಡಾ.ರಾಜ್ ಕುಮಾರ್ ಜೊತೆ ‘ಶೃತಿ ಸೇರಿದಾಗ’ ಚಿತ್ರದಲ್ಲಿನ “ಇದು ಬೊಂಬೆಯಾಟವಯ್ಯಾ…” ಹಾಡಿನಲ್ಲಿ ಅಮೋಘ ಅಭಿನಯವಂತೂ ಪ್ರೇಕ್ಷಕರನ್ನು ರಂಜಿಸಿತ್ತು. ಹಾಲು ಜೇನು, ಶ್ರಾವಣ ಬಂತು, ಗುರುಶಿಷ್ಯರು, ಮಲಯಮಾರುತ, ನೀನು ನಕ್ಕರೆ ಹಾಲು ಸಕ್ಕರೆ, ಚೈತ್ರದ ಪ್ರೇಮಾಂಜಲಿ ಚಿತ್ರಗಳು ಉಮೇಶ್ ಅಭಿನಯದ ಕೆಲವು ಚಿತ್ರಗಳು.
ಹೀಗೆ ಕನ್ನಡ ಚಿತ್ರರಂಗದ ಬಹುಮುಖ್ಯ ಭಾಗವಾದ ಎಂಎಸ್ ಉಮೇಶ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ಅವರನ್ನು ಸದ್ಯ ದಾಖಲಿಸಲಾಗಿದೆ.ಎಂಎಸ್ ಉಮೇಶ್ ಆಸ್ಪತ್ರೆಗೆ ದಾಖಲಾದ ವಿಚಾರವನ್ನು ತಿಳಿದ ಇವರ ಅಭಿಮಾನಿಗಳು ಬೇಗ ಚೇತರಿಸಿಕೊಂಡು ತಮ್ಮ ನೆಚ್ಚಿನ ನಟ ಮನೆಗೆ ಮರಳಿ ಬರುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.