ಹಿರಿಯ ಅನುಭವಿ ಯಕ್ಷಗಾನ ಅರ್ಥಧಾರಿ ವಿಟ್ಲ ಶಂಭು ಶರ್ಮ ನಿಧನ
Views: 111
ಕನ್ನಡ ಕರಾವಳಿ ಸುದ್ದಿ: ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಅರ್ಥದಾರಿ ವಿಟ್ಲ ಶಂಭು ಶರ್ಮ ನಿಧನರಾಗಿದ್ದಾರೆ.
ಅವರಿಗೆ 74 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಲ್ಲಿದ್ದ ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪುತ್ತೂರು ಸಮೀಪ ಮುರ ಎಂಬಲ್ಲಿನ ನಿವಾಸಿ ಶರ್ಮ ಅವರು, ಉಪನ್ಯಾಸಕರಾಗಿ, ಯಕ್ಷಗಾನ ಅರ್ಥಧಾರಿಯಾಗಿ ಭಾರೀ ಪ್ರಸಿದ್ಧಿ ಪಡೆದಿದ್ದರು.
ಶೇಣಿ ಗೋಪಾಲಕೃಷ್ಣ ಭಟ್ ಇನ್ನಿತರ ಖ್ಯಾತನಾಮರೊಂದಿಗೆ ತಾಳಮದ್ದಳೆಗಳಲ್ಲಿ ಅರ್ಥಗಾರಿಕೆ ಮಾಡಿದ ಅನುಭವಿಯಾಗಿದ್ದ ಶರ್ಮರು, ಖಳಪಾತ್ರ ಸಹಿತ ಯಾವುದೇ ಪಾತ್ರ ವಹಿಸಿದರೂ ಪಾತ್ರಕ್ಕೆ ಘನತೆ ತಂದಿಡುತ್ತಿದ್ದರು.
ಶಂಭು ಶರ್ಮ ಅವರು ಪತ್ನಿ, ಪುತ್ರನ ಸಹಿತ ಅಪಾರ ಅಭಿಮಾನಿಗಳು, ಬಂಧು, ಬಾಂಧವರು, ಅಭಿಮಾನಿಗಳನ್ನು ಅಗಲಿದ್ದಾರೆ.
ವಿಟ್ಲ ಶಂಭು ಶರ್ಮ ಎಂಬ ಹೆಸರು ಪ್ರಸಕ್ತ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಚಿರಪರಿಚಿತ. ಉತ್ತಮ ಅರ್ಥಧಾರಿ, ಪ್ರಸಂಗದ ನಡೆ, ಪದ್ಯಗಳ ಮರ್ಮ ಅರಿತು ಅರ್ಥ ಹೇಳಬಲ್ಲ ಬೆರಳೆಣಿಕೆಯ ಕಲಾವಿದರಲ್ಲಿ ಓರ್ವರು. ಚರ್ವಿತ ಚರ್ವಣದ ಲೇಪವಿಲ್ಲದ, ಹೇಳಬೇಕಾದುದನ್ನು ಒಂದೂ ಬಿಡದ, ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೊಂದು ‘ಪಾತ್ರ’ ಸೃಷ್ಟಿಸಬಲ್ಲ ಸಮರ್ಥ, ಹಿರಿಯ, ಅನುಭವೀ ಅರ್ಥಧಾರಿಗಳೂ ಹೌದು.
ಯಾವುದೇ ಪಾತ್ರ ಕೊಟ್ಟರೂ, ಲೀಲಾಜಾಲವಾಗಿ ನಿರ್ವಹಿಸಿ ಆ ಪಾತ್ರಕ್ಕೊಂದು ಗಟ್ಟಿಯ ನೆಲೆಗಟ್ಟನ್ನು ನಿರ್ಮಿಸಬಲ್ಲ ತಾಳಮದ್ದಳೆ ಕ್ಷೇತ್ರದ ಮುಮ್ಮೇಳದ ಸವ್ಯಸಾಚಿಗಳು ವಿಟ್ಲ ಶಂಭು ಶರ್ಮರು. ತಮ್ಮ ಅದ್ಭುತವಾದ ಮಂಡನೆ – ಖಂಡನೆ, ಸುಲಭವಾಗಿ ನಿರಾಕರಿಸಲಾಗದ ವಾದ ವೈಖರಿ, ಕಂಚಿನ ಕಂಠವಾದರೂ ಪಾತ್ರಗಳ ಸ್ವಭಾವ, ರಸಭಾವ ಲಕ್ಷಿಸಿ ಮಾತುಗಾರಿಕೆಯ ಏರಿಳಿತಗಳನ್ನು ಸಮರ್ಥವಾಗಿ ಬಿಂಬಿಸಬಲ್ಲ ಅಸಾಧಾರಣ ಕಲೆ ಶರ್ಮರನ್ನು ಇಂದು ಎತ್ತರಕ್ಕೆ ಏರಿಸಿದೆ ಎಂದರೆ ಅದು ಉಪ್ಪೇಕ್ಷೆಯ ಮಾತಂತೂ ಖಂಡಿತವಾಗಿಯೂ ಅಲ್ಲ.






