ರಾಜಕೀಯ

ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ  4ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟ ಬಿಜೆಪಿ ?

Views: 4

ಬೆಂಗಳೂರು,: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದಾಗಿ ಸ್ಪರ್ಧಿಸಲಿರುವ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಇಂದು ಬಹುತೇಕ ಅಂತಿಮವಾಗಿದ್ದು, ಜೆಡಿಎಸ್‌ಗೆ 4 ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಒಲವು ತೋರಿದ್ದಾರೆ.

ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಲು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ದೆಹಲಿಗೆ ತೆರಳಿದ್ದು, ಇಂದು ಬೆಳಿಗ್ಗೆ ಅವರು ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸೀಟು ಹಂಚಿಕೆ ಸೇರಿದಂತೆ ಎಲ್ಲ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆಗಳು ನಡೆದಿದ್ದು, ಜೆಡಿಎಸ್‌ಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 4 ಕ್ಷೇತ್ರಗಳನ್ನು ಬಿಟ್ಟುಕೊಡಲು ಪ್ರಧಾನಿ ಮೋದಿ ಅವರು ಸಮ್ಮತಿ ವ್ಯಕ್ತಪಡಿಸಿದರು ಎನ್ನಲಾಗಿದೆ.ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಂಜೆ ಯಾವ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಸಬೇಕು ಎಂಬ ಬಗ್ಗೆ ಅಂತಿಮವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಚರ್ಚೆ ಮಾಡಿ ಎಲ್ಲವನ್ನು ಅಂತಿಮ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.ಪ್ರಧಾನಿ ಮೋದಿ ಅವರನ್ನು ಸಂಸತ್ ಭವನದಲ್ಲಿರುವ ಪ್ರಧಾನಮಂತ್ರಿಗಳ ಕಾರ್ಯಾಲಯದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಭೇಟಿ ಮಾಡಿ ಎಲ್ಲದರ ಬಗ್ಗೆಯೂ ಚರ್ಚೆ ನಡೆಸಿದರು.ಜೆಡಿಎಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ 72 ಸ್ಥಾನಗಳನ್ನು ಬಿಟ್ಟುಕೊಡುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇಡಿಕೆ ಇಟ್ಟರಾದರೂ ೪ ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸ್ಪರ್ಧೆಗೆ ಬಿಜೆಪಿ ವರಿಷ್ಠರಿಂದ ಒಪ್ಪಿಗೆ ಸಿಕ್ಕಿದೆ.

ಜೆಡಿಎಸ್‌ಗೆ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ವರಿಷ್ಠರ ಮುಂದೆ ಪ್ರಸ್ತಾವನೆ ಇಟ್ಟರಾದರೂ ಬಿಜೆಪಿ ವರಿಷ್ಠರು 4 ಸ್ಥಾನಗಳನ್ನಷ್ಟೆ ಜೆಡಿಎಸ್‌ಗೆ ಬಿಡುವ ತೀರ್ಮಾನ ಮಾಡಿದ್ದಾರೆ ಎಂದು ಹೇಳಲಾಗಿದೆ.ಈ ಸಂಬಂಧ ಅಂತಿಮವಾಗಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜತೆ ಚರ್ಚೆ ನಡೆಸಿದ ನಂತರ ಅಧಿಕೃತ ತೀರ್ಮಾನವನ್ನು ಪ್ರಕಟಿಸಲಾಗುತ್ತದೆ.ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಈ 4ಸ್ಥಾನಗಳನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಡಲಿದೆ ಎಂದು ಹೇಳಲಾಗಿದೆ. ಉಳಿದೆಡೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿರುವುದರಿಂದ ಆ ಭಾಗದಲ್ಲಷ್ಟೇ ಜೆಡಿಎಸ್‌ಗೆ ಸೀಟುಗಳನ್ನು ಬಿಟ್ಟುಕೊಟ್ಟು ಉಳಿದೆಡೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕನಿಷ್ಠ 20 ಸೀಟುಗಳನ್ನು ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ರಣತಂತ್ರಗಳನ್ನು ರೂಪಿಸಿದೆ ಎಂದು ಹೇಳಲಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಹ ನಿನ್ನೆಯೇ ದೆಹಲಿಗೆ ತೆರಳಿದ್ದು, ಕುಮಾರಸ್ವಾಮಿ ಅವರ ಮೈತ್ರಿಮಾತುಕತೆಗೂ ಮುನ್ನ ವರಿಷ್ಠರು ವಿಜಯೇಂದ್ರ ಅವರ ಜತೆಯೂ ಸೀಟು ಹಂಚಿಕೆ ಬಗೆ ಪ್ರತ್ಯೇಕ ಚರ್ಚೆ ನಡೆಸಿ ಎಷ್ಟು ಮತ್ತು ಯಾವ ಕ್ಷೇತ್ರಗಳನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸುವರು ಎಂದು ಹೇಳಲಾಗಿದೆ.

ವಿಜಯೇಂದ್ರ ಅವರು ತಾವು ಪಕ್ಷ ಸಂಘಟನೆ ಸಂಬಂಧ ವರಿಷ್ಠರ ಜತೆ ಚರ್ಚಿಸಲು ದೆಹಲಿಗೆ ಬಂದಿದ್ದೇನೆ. ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ಬಂದಿದ್ದೇನೆ ಎಂದು ಸುದ್ದಿಗಾರರಿಗೆ ಹೇಳಿದ್ದರಾದರೂ ಅವರೂ ಸಹ ಸೀಟು ಹಂಚಿಕೆ ಬಗ್ಗೆ ವರಿಷ್ಠರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಿದ್ದು, ಜೆಡಿಎಸ್‌ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಗೆಲುವು ಸಾಧ್ಯ ಎಂಬುದನ್ನು ವರಿಷ್ಠರ ಗಮನಕ್ಕೆ ತರುವರು ಎಂದು ಹೇಳಲಾಗಿದೆ.

ನಾವು ಎಲ್ಲಿ ಕಣಕ್ಕಿಳಿಯಬೇಕು ಎಂದು ತೀರ್ಮಾನವಾಗಿದೆ. ಸೀಟು ಹಂಚಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜತೆ ಮಾತುಕತೆ ನಡೆಸಿ ಎಲ್ಲವನ್ನು ಅಂತಿಮ ಮಾಡುತ್ತೇವೆ ಎಂದರು.

ಇಂದು ಪ್ರಧಾನಿ ಮೋದಿ ಅವರನ್ನು ನಾನು, ಮಾಜಿ ಪ್ರಧಾನಿ ದೇವೇಗೌಡರು, ಹೆಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸಿ.ಎನ್ ಬಾಲಕೃಷ್ಣ ಎಲ್ಲರೂ ಭೇಟಿ ಮಾಡಿದ್ದೆವು. ಪ್ರಧಾನಿ ಬಳಿ ಬಹಳಷ್ಟು ವಿಷಯ ಚರ್ಚೆ ಮಾಡಿದ್ದೇವೆ. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಗೌರವ ಹೊಂದಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಇಟ್ಟಿರುವ ವಿಶ್ವಾಸ ಇವತ್ತಿಗೂ ಕಡಿಮೆಯಾಗಿಲ್ಲ ಎಂದರು.

ಮುಂದೆ ಕುಮಾರಸ್ವಾಮಿ ಕೇಂದ್ರ ಸಚಿವರಾಗುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರ ಹಣೆ ಮೇಲೆ ಏನು ಬರೆದಿದೆಯೋ ಗೊತ್ತಿಲ್ಲ. ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು. ಮೊನ್ನೆ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ಹೊಸಬರು ಮುಖ್ಯಮಂತ್ರಿಯಾದರು, ಹಾಗಾಗಿ ರಾಜಕೀಯದಲ್ಲಿ ಯಾವಾಗ ಏನು ಬೇಕಾದರು ಆಗಬಹುದು ಎಂದು ಮಾರ್ಮಿಕವಾಗಿ ಹೇಳಿದರು.

Related Articles

Back to top button
error: Content is protected !!