ಹಮಾಸ್ ಉಗ್ರರಿಂದ ಮತ್ತೆ ವಶಕ್ಕೆ ಪಡೆದ ಇಸ್ರೇಲ್: 3000 ದಾಟಿದ ಸಾವಿನ ಸಂಖ್ಯೆ

Views: 40
ಪ್ಯಾಲೆಸ್ತೀನ್ ಹಮಾಸ್ ಉಗ್ರರ ನಡುವೆ ಶುರುವಾದ ಯುದ್ಧದಲ್ಲಿ ಈವರೆಗೆ ಸಾವಿಗೀಡಾದವರ ಸಂಖ್ಯೆ 3000 ಗಡಿಯನ್ನು ದಾಟಿದೆ. ಯುದ್ಧ ಮುಂದುವರಿದಿದ್ದು, ಜನರು ಆತಂಕದಲ್ಲಿ ಸಮಯ ಕಳೆಯಬೇಕಾದ ಸ್ಥಿತಿಯು ಹಾಗೇ ಉಳಿದಿದೆ. ಹಮಾಸ್ ಉಗ್ರರಿಂದ ಗಾಜಾಪಟ್ಟಿಯ ಗಡಿ ಪ್ರದೇಶಗಳನ್ನು ಮತ್ತೆ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್ ತಿಳಿಸಿದೆ.
ಯುದ್ಧ ಶುರುವಾಗಿ ನಾಲ್ಕು ದಿನಗಳು ಕಳೆದಿವೆ. ಅಪಾರ ಪ್ರಾಣ ಹಾನಿ ಹಾಗೂ ಸಾರ್ವಜನಿಕ ಆಸ್ತಿ ಹಾನಿಯಾಗಿದೆ. ಅಟ್ಟಹಾಸ ಮೆರೆಯುತ್ತಿರುವ ಹಮಾಸ್ ಉಗ್ರರ ಗುಂಪನ್ನು ನಾಶಮಾಡುವ ಮತ್ತು ಇಡೀ ಮಧ್ಯಪ್ರಾಚ್ಯವನ್ನು ಬದಲಾಯಿಸುವ ನಿರಂತರ ಯುದ್ಧದ ಪ್ರಾರಂಭವಿದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಈ ನಡುವೆ, ಇಸ್ರೇಲ್-ಹಮಾಸ್ ಭೀಕರ ಕಾಳಗ ನಾಲ್ಕನೇ ದಿನ ಪ್ರವೇಶಿಸಿದ್ದು, ಇಸ್ರೇಲ್ ಗಾಜಾ ಪ್ರದೇಶದ ಗಡಿಗಳನ್ನು ತನ್ನ ವಶಕ್ಕೆ ಮರುಪಡೆದಿದೆ. ದಾಳಿ ಆರಂಭವಾದ ಪ್ರದೇಶದಲ್ಲಿ ಯುದ್ಧ ಇನ್ನಷ್ಟು ತೀವ್ರತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಇಸ್ರೇಲ್ನಲ್ಲಿ ಸಾವಿನ ಸಂಖ್ಯೆ 900ಕ್ಕೂ ಅಧಿಕವಾಗಿದೆ. ಕಳೆದ 75 ವರ್ಷಗಳಲ್ಲೇ ಇದು ಅಂತ್ಯಂತ ಭೀಕರ ದಾಳಿಯಾಗಿದ್ದು, ಗಾಜಾ ಒಂದರಲ್ಲೇ 765 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 1,600ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿ ಸತ್ತವರ ಮತ್ತು ಇಸ್ರೇಲ್ ಹೇಳಿಕೊಂಡಂತೆ 1,500 ಶವಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಮೃತರ ಒಟ್ಟು ಸಂಖ್ಯೆ 3,000 ದಾಟುತ್ತದೆ.
ಹಮಾಸ್ ಕೇಂದ್ರದ ತವರಾಗಿರುವ ಗಾಜಾ ಪಟ್ಟಣದ ಮೇಲೆ ಇಸ್ರೇಲಿ ಯುದ್ಧ ವಿಮಾನಗಳು ಮಂಗಳವಾರ ಮುಂಜಾನೆ ಭಾರಿ ಬಾಂಬ್ ದಾಳಿ ನಡೆಸಿವೆ. ಇಸ್ರೇಲ್ನ ವೈಮಾನಿಕ ಬಾಂಬ್ ದಾಳಿಗಳಿಂದ ನಲುಗಿರುವ ಗಾಜಾ ಪಟ್ಟಿಯ ಪ್ಯಾಲೆಸ್ತೀನಿಯರು ಪ್ರಾಣ ಉಳಿಸಿಕೊಳ್ಳಲು ಒಂದರಿಂದ ಇನ್ನೊಂದು ಪ್ರದೇಶಕ್ಕೆ ಓಡಾಡುತ್ತಿದ್ದಾರೆ. ಆದರೆ, ಎಲ್ಲಿ ಹೋದರೂ ಅವರಿಗೆ ಸುರಕ್ಷತೆ ಎಂಬುದು ಮರೀಚಿಕೆ ಯಾಗಿದೆ. ಅಂದಾಜು 1,80,000 ಪ್ಯಾಲೆಸ್ತೀನಿಯರು ವಿಶ್ವ ಸಂಸ್ಥೆಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.






