ಸಾಮಾಜಿಕ

ಹಣಕ್ಕಾಗಿ ಮದುವೆಯಾಗಿದ್ದ ಸ್ವಂತ ಮಗಳನ್ನೇ ಮಾರಾಟ ಮಾಡಿದ ತಾಯಿ.. ಕಣ್ತಪ್ಪಿಸಿ ಬಂದ ಹೆಣ್ಣಿನ ಕಣ್ಣೀರ ಕಥೆ!

Views: 88

ಕನ್ನಡ ಕರಾವಳಿ ಸುದ್ದಿ:  ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ತಾಯಿ ಮತ್ತು ಅಣ್ಣ ಸೇರಿ ವಿವಾಹಿತ ಮಗಳನ್ನು ಹರಿಯಾಣದ ವ್ಯಕ್ತಿಯೊಬ್ಬನಿಗೆ 1.38 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.

ಚಿತ್ರಕೂಟ ಮೂಲದ ಸಂತ್ರಸ್ತ ಮಹಿಳೆಗೆ ಈಗಾಗಲೇ ಮದುವೆ ಆಗಿತ್ತು. ಆದರೆ, ಹಣದ ಆಸೆಗೆ ಬಿದ್ದ ಆಕೆಯ ತಾಯಿ ಮುನ್ನಿ ಮತ್ತು ಸಹೋದರ ಜಯನಾರಾಯಣ್ ಆಕೆಯನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದರು. ಪ್ಲಾನ್‌ನಂತೆ ಮಗಳನ್ನು ನಂಬಿಸಿ ಚಿತ್ರಕೂಟದಿಂದ ಬಂಡಾಗೆ ಕರೆತಂದಿದ್ದಾರೆ. ಅಲ್ಲಿಂದ ಹರಿಯಾಣದ ಪಲ್ವಾಲ್ ಮೂಲದ ಕೃಷ್ಣ ಕುಮಾರ್ ಎಂಬಾತನಿಗೆ 1 ಲಕ್ಷ 38 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ.

ಮಹಿಳೆಯನ್ನು ಖರೀದಿಸಿದ ಕೃಷ್ಣ ಕುಮಾರ್, ಆಕೆಯನ್ನು ಹರಿಯಾಣಕ್ಕೆ ಕರೆದೊಯ್ದು ಅಲ್ಲಿ ಬಲವಂತವಾಗಿ ಎರಡನೇ ಮದುವೆಯಾಗಿದ್ದಾನೆ. ಅಲ್ಲಿ ಆಕೆಯನ್ನು ಅಕ್ರಮ ಬಂಧನದಲ್ಲಿಟ್ಟು ದೌರ್ಜನ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಬಹಳ ದಿನಗಳ ಕಾಲ ನರಕಯಾತನೆ ಅನುಭವಿಸಿದ ಮಹಿಳೆ, ಹೇಗೋ ಮಾಡಿ ಆರೋಪಿಗಳ ಕಣ್ಣು ತಪ್ಪಿಸಿ ಅಲ್ಲಿಂದ ಪಾರಾಗಿದ್ದಾರೆ. ನೇರವಾಗಿ ಬಂಡಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಕಚೇರಿಗೆ ತಲುಪಿ ತನ್ನ ಮೇಲೆ ನಡೆದ ದೌರ್ಜನ್ಯ ಮತ್ತು ತಾಯಿ-ಅಣ್ಣ ಮಾಡಿದ್ದ ದ್ರೋಹವನ್ನು ಕಣ್ಣೀರಿಡುತ್ತಾ ವಿವರಿಸಿದ್ದಾರೆ. ಮಹಿಳೆಯ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯೂನಿಟ್ ತನಿಖೆ ಆರಂಭಿಸಿದೆ.

ಈ ದಂಧೆಯಲ್ಲಿ ಭಾಗಿಯಾಗಿದ್ದ ಮಹಿಳೆಯ ಸಹೋದರ ಜಯನಾರಾಯಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮೊದಲು, ಮಹಿಳೆಯನ್ನು ಖರೀದಿಸಿದ್ದ ಹರಿಯಾಣದ ಕೃಷ್ಣ ಕುಮಾರ್ ಮತ್ತು ಆತನಿಗೆ ಸಾಥ್ ನೀಡಿದ್ದ ಬಲರಾಮ್ ಎಂಬುವವರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಹಣಕ್ಕಾಗಿ ಸ್ವಂತ ಮಗಳನ್ನೇ ಮಾರಾಟ ಮಾಡಿರುವುದು ಅತ್ಯಂತ ಗಂಭೀರ ಅಪರಾಧ. ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಾನವ ಕಳ್ಳಸಾಗಣೆ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬಂಡಾ ಎಸ್‌ಪಿ ತಿಳಿಸಿದ್ದಾರೆ.

Related Articles

Back to top button
error: Content is protected !!