ಸೆ.16ರಿಂದ ಮತ್ತೆ ಶಿರೂರು ಬಳಿ ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ಆರಂಭ

Views: 97
ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಗುಡ್ಡ ಕುಸಿದು ಭಾರಿ ಅನಾಹುತ ಸಂಭವಿಸಿದ ದುರ್ಘಟನೆಯಲ್ಲಿ ನಾಪತ್ತೆಯಾಗಿರುವ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಹಾಗೂ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮತ್ತೆ ಆರಂಭವಾಗಲಿದೆ.
ಧಾರಾಕಾರ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ಬಳಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿದ್ದ ಹೋಟೆಲ್, ಮನೆ ಹಾಗೂ ಬೃಹತ್ ಲಾರಿಗಳು ಕೊಚ್ಚಿ ನದಿಗೆ ಬಿದ್ದಿದ್ದವು. ಅಲ್ಲದೇ ಇದೇ ವೇಳೆ ಹೋಟೆಲ್, ಮನೆಯಲ್ಲಿದ್ದ ಒಟ್ಟು 11 ಮಂದಿ ನಾಪತ್ತೆಯಾಗಿದ್ದರು. ಪಕ್ಕದ ಉಳುವರೆ ಗ್ರಾಮದ ಹಲವು ಮನೆಗಳು ಧರಾಶಾಹಿಯಾಗಿದ್ದವು.
ಇದೀಗ ಮಳೆ ಕಡಿಮೆಯಾಗಿದೆ. ಕೂಡಲೇ ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಬೇಕು. ಅಲ್ಲದೆ, ಶಾಸಕರು ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಮತ್ತೆ ಕಾರ್ಯಾಚರಣೆಗೆ ಉತ್ಸುಕತೆ ತೋರಿದ್ದಾರೆ. .
ಶಿರೂರು ದುರ್ಘಟನೆಯಲ್ಲಿ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ ನಾಯ್ಕ ಮತ್ತು ಗಂಗೆಕೊಳ್ಳದ ಲೊಕೇಶ ನಾಯ್ಕ ಇದುವರೆಗೆ ಪತ್ತೆಯಾಗಿಲ್ಲ. ಮನೆಯವರನ್ನು ಕಳೆದುಕೊಂಡ ಕುಟುಂಬಸ್ಥರು ಸಾಕಷ್ಟು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿ ಮೃತದೇಹಗಳನ್ನು ಹುಡುಕಿಕೊಡುವಂತೆ ಅಂಗಲಾಚಿದ್ದರು. ಕಾರ್ಯಾಚರಣೆ ಮುಂದುವರಿಸುವಂತೆ ಕಾರವಾರ ಶಾಸಕ ಸತೀಶ ಸೈಲ್ ಕೂಡ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ್ದರು. ಆದರೆ, ಹವಾಮಾನ ವೈಪರೀತ್ಯದ ಕಾರಣದಿಂದ ಕಾರ್ಯಾಚರಣೆ ನಡೆಸಲು ಕಷ್ಟವಾಗಿತ್ತು.
ಶಿರೂರಿನ ಗುಡ್ಡ ಕುಸಿತವಾದ ಸ್ಥಳದಲ್ಲಿ ಗಂಗಾವಳಿ ನದಿಯಲ್ಲಿ ಡ್ರೆಜಿಂಗ್ ಯಂತ್ರದ ಮೂಲಕ ಶೋಧ ಕಾರ್ಯಾಚರಣೆ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಹೀಗಾಗಿ, ಅಭಿಶೇನಿಯಾ ಒಶಿಯನ್ ಸರ್ವಿಸ್ ಕಂಪನಿಯಿಂದ ಮಹಾರಾಷ್ಟ್ರದಿಂದ ಡ್ರೆಜಿಂಗ್ ಯಂತ್ರ ತರಿಸುವ ಸಿದ್ಧತೆ ನಡೆದಿದೆ. ಪ್ರತಿಕೂಲ ವಾತಾವರಣ ಕಡಿಮೆಯಾದ ಬಳಿಕ ಸೆಪ್ಟೆಂಬರ್ 16 ರಿಂದ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದರು






