ಸುಬ್ರಹ್ಮಣ್ಯ,ಬಂಟ್ವಾಳ, ವಿಟ್ಲ, ಬೆಳ್ತಂಗಡಿಯಲ್ಲಿ ಭಾರೀ ಮಳೆಯಿಂದ ವ್ಯಾಪಕ ಹಾನಿ

Views: 0
ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ಇಲ್ಲಿನ ಕೊಲ್ಲಮೊಗು, ಬಿಸಿಲೆ, ಅಡ್ಡ ಹೊಳೆ, ಸೋಮವಾರಪೇಟೆ ಮೊದಲಾದ ಕಡೆಗಳಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾದ ಕಾರಣ ನದಿ ತೀರಕ್ಕೆ ಪ್ರವಾಸಿಗರು ಹೋಗಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿರುವುದರಿಂದ ಭಕ್ತರು ಜಾಗೃತಿ ವಹಿಸಬೇಕೆಂದು ದೇವಳದ ಆಡಳಿತ ಮಂಡಳಿ ಸೂಚನೆ ನೀಡಿದೆ.
ಬಂಟ್ವಾಳದಲ್ಲಿಯೂ ಸುರಿದ ಧಾರಾಕಾರ ಮಳೆಯ ಪರಿಣಾಮ ಹಲವು ಕಡೆ ಹಾನಿ ಸಂಭವಿಸಿದೆ. ಮನೆಯ ಗೋಡೆ ಕುಸಿದು ಹಾನಿ ಸಂಭವಿಸಿದ್ದು, ಅಲ್ಲಲ್ಲಿ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ಬೆಳ್ತಂಗಡಿಯಲ್ಲಿಯೂ ಸುರಿಯುತ್ತಿರುವ ಮಳೆಯಿಂದಾಗಿ ತೆಂಗು, ಅಡಿಕೆ ಮರ ಬುಡ ಸಮೇತ ಧರೆಗುರುಳಿದು ಹಾನಿ ಸಂಭವಿಸಿದೆ.
ಇಲ್ಲಿನ ಪಡಂಗಡಿ ಗ್ರಾಮದ ರಿಚರ್ಡ್ಸ್ ಅವರ ಮನೆಗೆ ಗುಡ್ಡ ಕುಸಿದು ಅಪಾರ ಹಾನಿ ಸಂಭವಿಸಿದೆ.
ವಿಟ್ಲದಲ್ಲಿ ಭಾರಿ ಸುಳಿಗಾಳಿಗೆ ಜನ ತತ್ತರಿಸಿ ಹೋಗಿದ್ದಾರೆ. ಹಲವು ಮನೆಗಳು, ದನದ ಕೊಟ್ಟಿಗೆ, ವಿದ್ಯುತ್ ಕಂಬಗಳು ಉರುಳಿದೆ.