ಸುಜ್ಞಾನ ಪ.ಪೂ ಕಾಲೇಜು, ವಿದ್ಯಾರಣ್ಯ ಆಂಗ್ಲಮಾಧ್ಯಮ ಶಾಲೆ: ವಿದ್ಯಾರ್ಥಿ ಸಂಸತ್ತು ಪದಗ್ರಹಣ ಹಾಗೂ ಕಾನೂನು ಅರಿವು

Views: 77
ಕನ್ನಡ ಕರಾವಳಿ ಸುದ್ದಿ: ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಯಡಾಡಿ-ಮತ್ಯಾಡಿಯ ಸುಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಹಾಗೂ ಕಾನೂನು ಅರಿವು ಕಾರ್ಯಕ್ರಮ ಜುಲೈ 11ರಂದು ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ವಿದ್ಯಾರ್ಥಿ ಸಂಸತ್ತು ಪದಗ್ರಹಣ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಿದ್ಯಾರ್ಥಿ ಸಂಸತ್ತು ಪದಗ್ರಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಗೌರವಿಸಿದ ಹರಿರಾಮ್ ಶಂಕರ್ ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕೂಡ ಒಂದೊಂದು ಪ್ರತಿಭೆ ಅಡಗಿರುತ್ತದೆ ಅಂತಹ ಪ್ರತಿಭೆಯನ್ನು ವಿದ್ಯಾರ್ಥಿ ವೇದಿಕೆಯ ಮೂಲಕ ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡು ಎಲ್ಲರನ್ನು ಸಮಾನರಾಗಿ ನೋಡಿಕೊಂಡು, ಇನ್ಸ್ಟಾಗ್ರಾಮ್, ವಾಟ್ಸಾಪ್, ಫೇಸ್ ಬುಕ್ ಅದುವೆ ಜೀವನ ಅಲ್ಲ ಎಂದು ತಿಳಿದು ಪಾಠ ಪ್ರವಚನದ ಮೂಲಕ ಹೆಚ್ಚು ಆಸಕ್ತರಾಗಿ ಮುಂದೆ ಸಾಗಿದಾಗ ಆದರ್ಶ ವಿದ್ಯಾರ್ಥಿಯಾಗಿ ಬೆಳೆಯಬಹುದು.
ಸಮಾಜದಲ್ಲಿ ಭವಿಷ್ಯ ಹಾಳು ಮಾಡುವ ಉದ್ದೇಶದಿಂದ ಜಾಲತಾಣದ ಮೂಲಕ ಬ್ಲಾಕ್ ಮೇಲ್ ಪಿತೂರಿ ನಡೆಯುತ್ತದೆ ಇದ್ಯಾವುದಕ್ಕೂ ಜಗ್ಗದೆ, ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ ಯಾವುದೇ ಭೀತಿಗೆ ಒಳಗಾಗದೆ ಪೋಲಿಸರ ಹತ್ತಿರ ಬಂದು ದೂರು ನೀಡಿದಾಗ ನಿಮ್ಮ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.
ಸುಜ್ಞಾನ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಯಾವುದೇ ವ್ಯಸನಕ್ಕೆ ಬಲಿಯಾಗದೆ ಪಾಠದ ಜೊತೆಗೆ ಬದುಕಿನ ಉತ್ತಮ ರೀತಿ ನೀತಿಗಳನ್ನು ಅನುಸರಿಸಿಕೊಂಡಾಗ ಸಮಾಜದಲ್ಲಿ ಆದರ್ಶ ವಿದ್ಯಾರ್ಥಿಯಾಗಿ ಬೆಳೆದು ಕೀರ್ತಿವಂತರಾಗಬಹುದು ಎಂದರು.
ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಸಮಾಜ ಸೇವೆಯಲ್ಲಿ ಸಾಧನೆಗೈದ ಆದರ್ಶ ವ್ಯಕ್ತಿಗಳನ್ನು ಮಾದರಿಯಾಗಿಟ್ಟುಕೊಂಡು ವಿದ್ಯಾರ್ಥಿಗಳು ಅನುಸರಿಸಿದಾಗ ಉನ್ನತಮಟ್ಟದ ಸಾಧನೆಗಯ್ಯಲು ಸಾಧ್ಯ ಎಂದರು.
ವೇದಿಕೆಯಲ್ಲಿ ಖಜಾಂಚಿ ಭರತ್ ಶೆಟ್ಟಿ, ಸುಜ್ಞಾನ ಪಿಯು ಕಾಲೇಜಿನ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ, ಶಾಲಾ ವಿದ್ಯಾರ್ಥಿ ನಾಯಕಿ ಪ್ರಕೃತಿ ಪಿ.ಶೆಟ್ಟಿ ಉಪ ನಾಯಕ ಶಮಂತ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನದ ಮೂಲಕ ಮುಖ್ಯ ಅತಿಥಿಗಳನ್ನು ಹಾಗೂ ಸಂಸತ್ ಸದಸ್ಯ ವಿದ್ಯಾರ್ಥಿಗಳನ್ನು ವೇದಿಕೆಯಡೆಗೆ ಕರೆತರಲಾಯಿತು.ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ. ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಟ್ರಸ್ಟ್ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದು, ವಿದ್ಯಾರ್ಥಿ ವೇದಿಕೆ ಮೂಲಕ ಸಮಾಜ ಸೇವಾ ಕೈಂಕರ್ಯದಿಂದ ತನ್ನ ಏಳಿಗೆಯೊಂದಿಗೆ ಎಲ್ಲರ ಏಳಿಗೆ ಸಾಧಿಸಿದಾಗ ತನ್ನ ವ್ಯಕ್ತಿತ್ವ ಉನ್ನತ ಮಟ್ಟದಲ್ಲಿ ಬೆಳೆದು ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಶಿಕ್ಷಕ ವಿನಯ ಕುಮಾರ್ ಕೆ.ನಿರೂಪಿಸಿದರು, ಸಂಸ್ಥೆಯ ಪ್ರಾಂಶುಪಾಲ ರಂಜನ್ ಬಿ.ಶೆಟ್ಟಿ ವಂದಿಸಿದರು.