ಸೀನಿಯರ್ ಮೇಲೆ ಮೋಹ ಹೆಚ್ಚಾಯಿತೋ ಆಗಲೇ ಪತ್ನಿಯನ್ನು ಮುಗಿಸಲು 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ ಪತಿರಾಯ!

Views: 211
ಕನ್ನಡ ಕರಾವಳಿ ಸುದ್ದಿ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ.
ಚೈತಾಲಿ ಗಂಡನ ಸುಪಾರಿಗೆ ಬಲಿಯಾದ ಮಹಿಳೆ. ಪ್ರದೀಪ್ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಪ್ರದೀಪ್ ಸೇರಿ, ಸಾಥ್ ನೀಡಿದ್ದ ಇನ್ನಿಬ್ಬರು ಆರೋಪಿಗಳನ್ನು ಕಾಗವಾಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಪತಿ ಪ್ರದೀಪ್ ಹಾಗೂ ಮೃತ ಚೈತಾಲಿ ಉಗಾರ್ ಬಿ.ಕೆ.ಗ್ರಾಮದವರು. ಒಂದೇ ಗ್ರಾಮದವರಾದ ಇವರು ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ಸಾಕ್ಷಿಯಾಗಿ ಆರು ತಿಂಗಳ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದುಬಂದಿದೆ.
ಕಾನೂನು ಪದವಿ ಪಡೆದಿದ್ದ ಪ್ರದೀಪ್ ಕಿರಣಗಿ, ಕಾಗವಾಡ ಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದ. ಪ್ರೇಮ-ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಪ್ರದೀಪ್ಗೆ ಲವ್ ಶುರುವಾಗಿತ್ತಂತೆ. ಸೀನಿಯರ್ ಲೇಡಿಯನ್ನು ಬುಟ್ಟಿಗೆ ಹಾಕಿಕೊಳ್ಳಲು ತನಗೆ ಮದುವೆಯೇ ಆಗಿಲ್ಲ ಎಂದು ನಾಟಕವಾಡಿದ್ದಾನೆ ಎನ್ನಲಾಗಿದೆ. ಜೂನಿಯರ್ ಪ್ರದೀಪ್ ಮಾತು ನಂಬಿದ್ದ ಸೀನಿಯರ್, ಪ್ರೀತಿಯ ಬಲೆಗೆ ಬಿದ್ದಿದ್ದಳು. ಯಾವಾಗ ಸೀನಿಯರ್ ಮೇಲೆ ಮೋಹ ಹೆಚ್ಚಾಯಿತೋ ಆಗಲೇ ಪತ್ನಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.
ಪ್ರದೀಪ್ ತನ್ನ ಹೆಂಡತಿಯನ್ನ ಮುಗಿಸಲು ಸ್ನೇಹಿತನ ಸಹಾಯ ಪಡೆದಿದ್ದಾನೆ. ಸ್ನೇಹಿತ ರಾಜೇಂದ್ರ ಜೊತೆ ಮಾತುಕತೆ ನಡೆಸಿ 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದ ಎನ್ನಲಾಗಿದೆ. ಅಂತೆಯೇ ಚೈತಾಲಿಯನ್ನು ಮುಗಿಸಲು ಎರಡು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅದು ಫೇಲ್ ಆಗಿತ್ತು. ಮೂರನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿಯ ಜೀವ ತೆಗೆದಿದ್ದರು.
ಆರೋಪಿಗಳಿಬ್ಬರು ಹಾಗೂ ಪ್ರದೀಪ್ ಸೇರಿ ಪ್ಲಾನ್ ಮಾಡಿದ್ದಾರೆ. ಪ್ಲಾನ್ ಪ್ರಕಾರವೇ ಆಕೆಯನ್ನು ಮುಗಿಸಿ, ಮೃತದೇಹವನ್ನು ಕೆಲ ಹೊತ್ತು ರಸ್ತೆಗೆ ತಂದು ಕಾಲ ಕಳೆದಿದ್ದಾರೆ. ಅದಾದ ನಂತರ ಆರೋಪಿ ಪ್ರದೀಪ್ ಪೊಲೀಸರಿಗೆ ಖುದ್ದು ಕರೆ ಮಾಡಿದ್ದಾನೆ. ಸೆಪ್ಟೆಂಬರ್ 7 ರಂದು ರಾತ್ರಿ 9.30ಕ್ಕೆ ಕರೆ ಮಾಡಿದ ಆತ, ಸರ್ ರಸ್ತೆಯಲ್ಲಿ ಹೋಗುವಾಗ ಅಪಘಾತ ಆಗಿದೆ. ನನ್ನದೇ ಕಾರಿನಲ್ಲಿ ಹೋಗುವಾಗ ಅಪಘಾತ ಆಗಿದೆ. ಹೆಂಡತಿಗೆ ಗಂಭೀರ ಪೆಟ್ಟು ಬಿದ್ದಿದೆ. ನನಗೂ ಗಾಯವಾಗಿದೆ. ಪತ್ನಿ ಚೈತಾಲಿಯನ್ನು ಕಾಗವಾಡ ತಾಲೂಕು ಆಸ್ಪತ್ರೆಗೆ ದಾಖಲಿಸುತ್ತಿರೋದಾಗಿ ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾಗವಾಡ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಪೊಲೀಸರು ಆಸ್ಪತ್ರೆಗೆ ಹೋದಾಗ ಚೈತಾಲಿ ಅನ್ನೋರು ಯಾರೂ ಇರಲಿಲ್ಲ. ಕೂಡಲೇ ಪೊಲೀಸರು ಪ್ರದೀಪ್ಗೆ ಕರೆ ಮಾಡಿದ್ದಾರೆ. ಆಗ ಕಾಗವಾಡ ಬದಲು ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ಚೈತಾಲಿ ಕರೆತಂದಿರುವುದಾಗಿ ಪೊಲೀಸರಿಗೆ ಪ್ರದೀಪ್ ಮಾಹಿತಿ ನೀಡಿದ್ದಾನೆ. ತಕ್ಷಣವೇ ಪ್ರದೀಪ್ ನಿವಾಸಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದಾರೆ. ಆಗ ಪ್ರದೀಪ್ ನಿವಾಸದ ಎದುರು ಕಾರು ನಿಂತಿತ್ತು. ಇದರಿಂದ ಪ್ರದೀಪ್ ನಡೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ.
ಇದರ ನಡುವೆ ಪ್ರದೀಪ್ ಮೀರಜ್ ಪೊಲೀಸರನ್ನು ಭೇಟಿಯಾಗಿ, ಪತ್ನಿ ಅಪಘಾತದಿಂದ ಮೃತರಾಗಿದ್ದು ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಆಗ ಮೀರಜ್ ಪೊಲೀಸರು ಕಾಗವಾಡ ಠಾಣೆಯ ಪೊಲೀಸರನ್ನು ಸಂಪರ್ಕಿಸುತ್ತಾರೆ. ಆಗ ನಾವು ಮೀರಜ್‌ಗೆ ಬರ್ತಿದ್ದೇವೆ, ಯಾವುದೇ ದೂರು ದಾಖಲಿಸಿಕೊಳ್ಳದಂತೆ ಮನವಿ ಮಾಡುತ್ತಾರೆ.
ಮೀರಜ್‌ಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರದೀಪ್ನ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಪ್ರದೀಪ್ಗೆ ಅಪಘಾತದಿಂದ ಯಾವುದೇ ಗಾಯ ಆಗದಿರೋದು ಗೊತ್ತಾಗಿದೆ. ಚೈತಾಲಿ ಮೃತದೇಹ ನೋಡಿದ ಪೊಲೀಸರು ಇದು ಅಪಘಾತವಲ್ಲ, ಕೊಲೆ ಎಂಬುದನ್ನು ಮೇಲ್ನೋಟಕ್ಕೆ ಪತ್ತೆಹಚ್ಚಿಕೊಳ್ತಾರೆ. ತಕ್ಷಣವೇ ಪ್ರದೀಪ್ನನ್ನ ತೀವ್ರ ವಿಚಾರಣೆ ಮಾಡಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಾತ್ರವಲ್ಲ, ಸ್ಥಳ ಮಹಜರು ವೇಳೆ ಪ್ರಕರಣಕ್ಕೆ ಸಾಥ್ ನೀಡಿದವರ ಹೆಸರನ್ನೂ ಹೇಳಿದ್ದಾನೆ. ಪ್ರಕರಣದಲ್ಲಿ ಐವರು ಆರೋಪಿಗಳು ಭಾಗಿಯಾಗಿರುವ ಶಂಕೆಯಿದ್ದ, ಮೂವರ ಬಂಧನವಾಗಿದೆ. ಮತ್ತಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.