ಚಿನ್ನಯ್ಯ ತಂದ ತಲೆಬುರುಡೆ ರಹಸ್ಯಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಪ್ರದೀಪ್!

Views: 207
ಕನ್ನಡ ಕರಾವಳಿ ಸುದ್ದಿ: ಸಾಕ್ಷಿ ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಒಪ್ಪಿಸಿದ ತಲೆಬುರುಡೆ ಹಾಗೂ ಧರ್ಮಸ್ಥಳ ಗ್ರಾಮದಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಪ್ರಕರಣವು ದಿನೇ ದಿನೇ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೌಜನ್ಯ ಪರ ಹೋರಾಟಗಾರ ಪ್ರದೀಪ್ ಅವರನ್ನು ಎಸ್‌ಐಟಿ (ವಿಶೇಷ ತನಿಖಾ ತಂಡ) ಪೊಲೀಸರು ವಿಚಾರಣೆಗೊಳಪಡಿಸಿದ್ದು, ಅವರ ಹೇಳಿಕೆಯು ಪ್ರಕರಣದಲ್ಲಿ ವಿಠಲ ಗೌಡನ ಪಾತ್ರವನ್ನು ಬಯಲು ಮಾಡುವ ಸಾಧ್ಯತೆ ಇದೆ.
ಬೆಳ್ತಂಗಡಿಯಲ್ಲಿ ಗ್ಯಾರೇಜ್ ನಡೆಸುತ್ತಿರುವ ಬಂಟ್ವಾಳ ಬಂಡಾರಿಬೆಟ್ಟು ನಿವಾಸಿ ಪ್ರದೀಪ್ ಕುಲಾಲ್ ಅವರನ್ನು ಶುಕ್ರವಾರ ಸಂಜೆ ಎಸ್‌ಐಟಿ ತಂಡವು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಸಾಕ್ಷ್ಯವಾಗಿ ಹೇಳಿಕೆ ಪಡೆದಿದೆ. ಪ್ರದೀಪ್ ಅವರ ಹೇಳಿಕೆಯಿಂದ ಚಿನ್ನಯ್ಯ ನ್ಯಾಯಲಯಕ್ಕೆ ಒಪ್ಪಿಸಿದ ತಲೆಬುರುಡೆ ರಹಸ್ಯ ಬಹಿರಂಗವಾಗಿದೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ಸಂದರ್ಭದಲ್ಲೇ ಪ್ರದೀಪ್ ಅವರನ್ನು ಹಲವು ದಿನಗಳ ಕಾಲ ವಿಚಾರಣೆ ನಡೆಸಿದ ಎಸ್‌ಐಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳು ಮತ್ತು ಸಾಕ್ಷ್ಯಗಳನ್ನು ಕಲೆಹಾಕಿದೆ. ಶುಕ್ರವಾರ ಮಧ್ಯಾಹ್ನದ ಮೇಲೆ ಬಿಎನ್‌ಎಸ್ 183ರ ಅಡಿಯಲ್ಲಿ ನ್ಯಾಯಾಧೀಶರ ಮುಂದೆ ಪ್ರದೀಪ್ ಹೇಳಿಕೆಯನ್ನು ದಾಖಲಿಸಲಾಗಿದ್ದು, ಇದು ಮ್ಯಾಜಿಸ್ಟ್ರೇಟ್ ಮುಂದೆ ಸಾಕ್ಷಿ ನೀಡಿದಂತೆ ಆಗುತ್ತದೆ. ಇದರ ಆಧಾರದ ಮೇಲೆ ಪ್ರಕರಣದ ಮುಂದಿನ ತನಿಖೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.