ಸಿಎಂ ಬದಲಾವಣೆ,ಮುಂದುವರೆಸುವುದು ಹೈಕಮಾಂಡ್ಗೆ ಬಿಟ್ಟಿದ್ದು

Views: 14
ಬೆಂಗಳೂರು, ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವುದು ಮುಂದುವರೆಸುವುದು ಹೈಕಮಾಂಡ್ಗೆ ಬಿಟ್ಟದ್ದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಐದು ವರ್ಷದವರೆಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂಬ ಯತೀಂದ್ರ ಸಿದ್ಧರಾಮಯ್ಯ ಹೇಳಿಕೆಗೆ ಬೆಂಗಳೂರಿನಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭೆಯಲ್ಲಿ ಸಿದ್ಧರಾಮಯ್ಯ ಒಬ್ಬರೇ ಅಲ್ಲ, ಕೆಪಿಸಿಸಿ ಅಧ್ಯಕ್ಷರು, ಸಚಿವರುಗಳು, ಶಾಸಕರುಗಳು ಎಲ್ಲ ಇದ್ದೇವೆ. ಎಲ್ಲ ಸೇರಿ 28 ಕ್ಷೇತ್ರಗಳನ್ನು ಗೆಲ್ಲಲು ಪ್ರಯತ್ನ ಮಾಡುತ್ತೇವೆ ಎಂದರು
ಚುನಾವಣೆಯಲ್ಲಿ ಅಂತಿಮವಾಗಿ ಜನ ಯಾವ ರೀತಿ ಸಹಕಾರ ಕೊಡುತ್ತಾರೋ ಜನರಿಗೆ ಬಿಟ್ಟದ್ದು. ನಮಗಂತೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ. ಹೈಕಮಾಂಡ್ ಸಹ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ಹೇಳಿದೆ. ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನವಾಗಿದೆ. ಜನರಿಗೆ ಇದೆಲ್ಲಾ ಗೊತ್ತಿದೆ. ಸರ್ಕಾರದ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಇದೆ ಎಂದರು.
ಮುಖ್ಯಮಂತ್ರಿ ಬದಲಾವಣೆ, ಮುಂದುವರಿಕೆ ಎಲ್ಲವೂ ಹೈಕಮಾಂಡ್ಗೆ ಸೇರಿದ್ದು, ಈ ಬಗ್ಗೆ ನಾವೆಲ್ಲಾ ಮಾತನಾಡುವುದು ಸರಿಯಲ್ಲ ಎಂದರು.
ಮಾಜಿ ಸಂಸದ ಮುದ್ದಹನುಮೇಗೌಡರ ಕಾಂಗ್ರೆಸ್ ಸೇರ್ಪಡೆ ದಿನಾಂಕವನ್ನು ಕೆಪಿಸಿಸಿ ಅಧ್ಯಕ್ಷರು ಹೈಕಮಾಂಡ್ನೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಜ. 19ರಂದು ಪಕ್ಷದ ಚುನಾವಣಾ ಸಮಿತಿ ಇದೆ. ಆ ಸಮಿತಿಯಲ್ಲಿ ಲೋಕಭಾ ಚುನಾವಣೆಯ ಸಂಭಾವನೀಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಿ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಸಮಿತಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರಗಳಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಹೈಕಮಾಂಡ್ ಅಂತಿಮವಾಗಿ ತೀರ್ಮಾನ ಕೈಗೊಳ್ಳುತ್ತದೆ ಎಂದು ಅವರು ಹೇಳಿದರು.






