ಸಾಲಿಗ್ರಾಮ ಮೇಳದಲ್ಲಿ ಪ್ರಧಾನ ಭಾಗವತನಾಗಿ ಇಲ್ಲ, ಅತಿಥಿ ಭಾಗವತನಾಗಿ : ರಾಮಕೃಷ್ಣ ಹೆಗಡೆ ಹಿಲ್ಲೂರು ಸ್ಪಷ್ಟನೆ

Views: 0
ಎಲ್ಲಾ ಮೇಳಗಳಲ್ಲಿ ಪ್ರಧಾನ ಭಾಗವತರ ಪಟ್ಟಿ ಹೊರ ಬೀಳುತ್ತಿದ್ದಂತೆ ಹಿಲ್ಲೂರು ಯಾವ ಮೇಳಕ್ಕೆ…?! ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆಗುತ್ತಿರುವಾಗಲೇ ಹಿಲ್ಲೂರು ಯಕ್ಷಾಭಿಮಾನಿಗಳಿಗೆ ಜಾಲತಾಣದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ವಯಕ್ತಿಕ ಕಾರಣದಿಂದ ಈ ವರ್ಷ ಸಾಲಿಗ್ರಾಮ ಯಕ್ಷಗಾನ ಮೇಳದಲ್ಲಿ ಪ್ರಧಾನ ಭಾಗವತನಾಗಿ ಇಲ್ಲ. ಆದರೆ, ಅತಿಥಿಯಾಗಿ ಭಾಗವಹಿಸುತ್ತೇನೆ ಎಂದು ಬಡಗಿನ ಖ್ಯಾತ ಯಕ್ಷಗಾನ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು ಹೀಗೆ
ಈ ವರ್ಷ ನನ್ನದೇ ಆದ ಕೆಲವು ವಯಕ್ತಿಕ ಕಾರಣದಿಂದ ನಾನು ಸಾಲಿಗ್ರಾಮ ಮೇಳದಿಂದ ವಿರಾಮ ತೆಗೆದುಕೊಂಡಿದ್ದೇನೆ. ಈ ವಿಷಯಕ್ಕೆ ಸಂಬಂಧಪಟ್ಟು ಸಾಮಾಜಿಕ ಜಾಲತಾಣದಲ್ಲಿ ಕೆಲ ಚಾನೆಲ್ ಗಳು ಮತ್ತು ಕೆಲ ವ್ಯಕ್ತಿಗಳು ಇಲ್ಲ ಸಲ್ಲದ ಸುದ್ದಿಯನ್ನು ಪ್ರಚಾರ ಮಾಡುತ್ತಿರುವುದು ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ.
ಸಾಲಿಗ್ರಾಮ ಮೇಳದಿಂದ ಹಿಲ್ಲೂರರನ್ನು ಕೈ ಬಿಟ್ಟಿದ್ದು ಯಾಕೆ? ಗೇಟ್ ಪಾಸ್ ನೀಡಿದ್ದು ಯಾಕೆ? ಇಂತಹ ಹೇಳಿಕೆಯನ್ನು ನೀಡಿ ಕಲಾಭಿಮಾನಿಗಳಿಗೆಲ್ಲ ಗೊಂದಲ ಸೃಷ್ಠಿಸುವ ಕೆಲಸವನ್ನು ದಯವಿಟ್ಟು ಯಾರೂ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಯಾವುದೇ ಊಹಾಪೋಹಗಳಿಗೆ ಯಾರೂ ಕಿವಿಗೊಡಬೇಡಿ. ಮೇಳದ ಯಜಮಾನರು ಹಾಗೂ ನಾನು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಮೇಳವನ್ನು ಬಿಡಬೇಕೆನ್ನುವುದು ನನ್ನ ವಯಕ್ತಿಕ ನಿರ್ಧಾರ. ಇಲ್ಲಿ ಯಾರ ಒತ್ತಡವೂ ಇಲ್ಲ. ಪ್ರಸ್ತುತ ವರ್ಷ ಅತಿಥಿ ಭಾಗವತನಾಗಿ ಕಾರ್ಯನಿರ್ವಹಿಸಲಿದ್ದೇನೆ. ಉಳಿದ ಕಡೆ ಕೂಡ ಕಲಾಭಿಮಾನಿಗಳ ಆಹ್ವಾನದ ಮೇರೆಗೆ ಅತಿಥಿ ಭಾಗವತನಾಗಿ ಭಾಗವಹಿಸಲಿದ್ದೇನೆ. ಸಹೃದಯಿ ಕಲಾಭಿಮಾನಿಗಳ ಪ್ರೋತ್ಸಾಹ ಸದಾ ಇರಲಿ ಎಂದೂ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ.






