ಇತರೆ

ಸರ್ಕಾರಿ ಹುದ್ದೆಗೆ ಸಂಚಕಾರ ಭಯ…ನವಜಾತ ಶಿಶುವನ್ನು ಕಾಡಿನಲ್ಲಿ ಬಿಸಾಡಿದ ಶಿಕ್ಷಕ! 

Views: 124

ಕನ್ನಡ ಕರಾವಳಿ ಸುದ್ದಿ: ಕಲ್ಲಿನ ರಾಶಿಯ ಕೆಳಗೆ ನವಜಾತ ಶಿಶುವೊಂದು ನರಳಾಡುತ್ತಿತ್ತು.ಈ ದೃಶ್ಯ ಕಂಡುಬಂದಿದ್ದು ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ನಂದನವಾಡಿ ಗ್ರಾಮದಲ್ಲಿ. ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ತನ್ನ ಹುದ್ದೆ ಉಳಿಸಿಕೊಳ್ಳಲು ಮೂರು ದಿನಗಳ ಹಿಂದಷ್ಟೇ ಜನಿಸಿದ್ದ ಶಿಶುವನ್ನು ರಸ್ತೆ ಬದಿಯ ಕಲ್ಲಿನ ರಾಶಿಯ ಕೆಳಗೆ ಬಿಸಾಡಿ ಹೋಗಿದ್ದ ಎಂಬ ಅಚ್ಚರಿಯ, ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಪಾಳುಬಿದ್ದ ಪ್ರದೇಶದಲ್ಲಿ ಮಗುವಿನ ನರಳಾಟ ಕೇಳಿದ ದಾರಿಹೋಕರು ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ನವಜಾತ ಶಿಶುವು ಕಂಡುಬಂದಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ. ಸದ್ಯ ಶಿಶುವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆಯ ಬಗ್ಗೆ ಮಾಹಿತಿ ನಿಡಿರುವ ಪೊಲೀಸ್ ಅಧಿಕಾರಿ ಲಖನ್ಲಾಲ್ ಅಹಿರ್ವಾರ್, ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕ ಬಬ್ಲು ದಾಂಡೋಲಿಯಾ ಎಂಬಾತನಿಗೆ ಸೇರಿದ ಮಗು ಇದಾಗಿದೆ ಎಂದು ತಿಳಿದುಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಶಿಕ್ಷಕನಿಗೆ ಈಗಾಗಲೇ ಮೂರು ಮಕ್ಕಳಿವೆ. ನಾಲ್ಕನೇ ಮಗು ಜನಿಸಿದ್ದು, ತನ್ನ ಹುದ್ದೆಗೆ ಸಂಚಕಾರ ಬರುತ್ತದೆ ಎಂದು ಭಾವಿಸಿ ಮಗುವನ್ನು ಕಾಡುಪ್ರದೇಶದಲ್ಲಿ ಬಿಸಾಡಿದ್ದಾನೆ ಎಂದು ತಿಳಿಸಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಯಾವುದೇ ಸರ್ಕಾರಿ ನೌಕರರನ್ನು ವಜಾ ಮಾಡಬಹುದಾಗಿದೆ. ಕೆಲಸ ಕಳೆದುಕೊಳ್ಳುವ ಭಯದಿಂದ ಶಿಕ್ಷಕ ಇಂತಹ ದುಷ್ಕೃತ್ಯ ನಡೆಸಿದ್ದಾನೆ. ಪತ್ನಿ ಗರ್ಭಿಣಿಯಾದಾಗಲೂ ಯಾರಿಗೂ ಮಾಹಿತಿ ನೀಡಿರಲಿಲ್ಲ. ಮನೆಯಲ್ಲೇ ಹೆರಿಗೆ ಮಾಡಿಸಿದ್ದಾನೆ. ಮಗು ಜನಿಸಿದ ಬಳಿಕ ಕಾಡಿನಲ್ಲಿ ಕಲ್ಲುಗಳ ಕೆಳಗೆ ಹೂತು ಹಾಕಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಡಿಎನ್ಎ ಪರೀಕ್ಷೆ: ಆರೋಪಿ ಶಿಕ್ಷಕನನ್ನು ವಶಕ್ಕೆ ಪಡೆಯಲಾಗಿದೆ. ಮೂರು ದಿನಗಳ ಹಿಂದೆ ಶಿಕ್ಷಕನ ಮನೆಯಲ್ಲಿ ಮಗು ಜನಿಸಿದ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಇದರ ಆಧಾರದ ಮೇಲೆ, ದಂಪತಿಯನ್ನು ವಿಚಾರಣೆ ನಡೆಸಲಾಯಿತು. ಮಗುವಿನ ಪೋಷಕರು ಇವರೇ ಎಂಬುದನ್ನು ತಿಳಿಯಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು. ಆರೋಪ ಸಾಬೀತಾದಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ನಿಯಮ ಏನು ಹೇಳುತ್ತದೆ?: ಜನವರಿ 26, 2001 ರ ನಂತರ ಮೂರನೇ ಮಗುವನ್ನು ಹೊಂದಿರುವ ಯಾರನ್ನಾದರೂ ಅವರ ಕೆಲಸದಿಂದ ವಜಾಗೊಳಿಸಬಹುದು ಎಂದು ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಕುಟುಂಬ ಯೋಜನೆ ಮತ್ತು ಜನಸಂಖ್ಯಾ ನಿಯಂತ್ರಣದ ಉದ್ದೇಶಕ್ಕಾಗಿ ಸರ್ಕಾರ ಈ ನಿಯಮ ಜಾರಿಗೆ ತಂದಿದೆ.

ಶಿಕ್ಷಕನಿಗೆ ಈಗಾಗಲೇ ಮೂರು ಮಕ್ಕಳಿವೆ: ಸರ್ಕಾರಿ ನಿಯಮಗಳ ಪ್ರಕಾರ, ಮೂರನೇ ಮಗು ಹೊಂದಿರುವುದು ನಿಯಮ ಬಾಹಿರ. ಆರೋಪಿ ಶಿಕ್ಷಕನಿಗೆ 2001 ರಿಂದ ಅನ್ವಯವಾಗುವಂತೆ ಈಗಾಗಲೇ ಮೂರು ಮಕ್ಕಳಿವೆ. ಆದಾಗ್ಯೂ ಆತ ಹುದ್ದೆಯಲ್ಲಿದ್ದಾನೆ. ನಾಲ್ಕನೇ ಮಗು ಜನಿಸಿದ ಬಳಿಕ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದರೆ, ಆತ ತನ್ನ ಮೂರನೇ ಮಗುವಿನ ಜನನವನ್ನು ತಡೆಯಬೇಕಿತ್ತು. ನಾಲ್ಕನೇ ಮಗುವನ್ನು ಕಾಡಿನಲ್ಲಿ ಜೀವಂತವಾಗಿ ಹೂತುಹಾಕಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

 

Related Articles

Back to top button
error: Content is protected !!