ಶ್ರೀಮತಿ ಶೆಟ್ಟಿ ಹತ್ಯೆಗೈದು 29 ತುಂಡು ಮಾಡಿ ಬಿಸಾಡಿದ ಮೂವರ ಕೃತ್ಯ ಸಾಬೀತು

Views: 458
ಮಂಗಳೂರು: ನಗರವನ್ನೇ ಬೆಚ್ಚಿ ಬೀಳಿಸಿದ್ದ ಅತ್ತಾವರದಲ್ಲಿ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟುಕೊಂಡು, ಕುರಿಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಶ್ರೀಮತಿ ಶೆಟ್ಟಿ (42) ಅವರ ಕೊಲೆ ಪ್ರಕರಣದಲ್ಲಿ ಮೂವರನ್ನು ದೋಷಿಗಳೆಂದು ಇಲ್ಲಿಯ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಸೆಮಿನರಿ ಕಂಪೌಂಡ್, ಅತ್ತಾವರ ನ್ಯೂರೋಡ್ ಕಂಕನಾಡಿಯ ಮೂಲ ನಿವಾಸಿಯಾಗಿರುವ ಜೋನಸ್ ಸ್ಯಾಮ್ಸನ್ ಅಲಿಯಾಸ್ ಜೋನಸ್ ಜೌಲಿನ್ ಸ್ಯಾಮ್ಸನ್,(40) ಅವರ ಪತ್ನಿ ವೆಲೆನ್ಸಿಯಾದ ವಿಕ್ಟೋರಿಯಾ ಮಥಾಯಿಸ್(47) ಹಾಗೂ ಕುಂಜತ್‌ಬೈಲ್ ಮರಕಡ ಗ್ರಾಮ ತಾರಿಪಾಡಿ ಗುಡ್ಡೆಯ ರಾಜು(34) ಘೋಷಿತ ಆರೋಪಿಗಳು. ಇವರಿಗೆ ಶಿಕ್ಷೆ ಪ್ರಮಾಣವನ್ನು ಇದೇ 17ರಂದು ಪ್ರಕಟಿಸಲಿದೆ.
ಜೋನಸ್ ಸ್ಯಾಮ್ಸನ್ ಕುರಿಚಿಟ್ ಫಂಡ್‌ನಲ್ಲಿ ಎರಡು ಸದಸ್ಯತ್ವ ಹೊಂದಿದ್ದ. ಅವಧಿಗೆ ಮೊದಲೇ ಎರಡೂ ಸದಸ್ಯತ್ವದ ಹಣವನ್ನು ಪಡೆದುಕೊಂಡಿದ್ದ. ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಕಂತು ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸಿದ್ದರು. 11.5.2019ರಂದು ಬೆಳಿಗ್ಗೆ ತಮ್ಮ ದ್ವಿಚಕ್ರವಾಹನದಲ್ಲಿ ಶ್ರೀಮತಿ ಶೆಟ್ಟಿ ಅವರು ಹಣ ಕೇಳಲು ಜೋನಸ್ ಸ್ಯಾಮ್ಸನ್‌ನ ಮನೆಗೆ ಹೋಗಿದ್ದರು. ಹಣ ಕೊಡದಿದ್ದುದಕ್ಕೆ ಶ್ರೀಮತಿ ಶೆಟ್ಟಿ ಅವರು ಬೈದಾಗ, ಜೋನಸ್ ಸ್ಯಾಮ್ಸನ್ ಕೋಪಗೊಂಡು ಮರದ ಪಟ್ಟಿಯ ತುಂಡಿನಿಂದ ಶ್ರೀಮತಿಅವರ ಹಣೆಗೆ ಹೊಡೆದಿದ್ದ. ಶ್ರೀಮತಿ ಅವರು ಅಲ್ಲಿಯೇ ನೆಲಕ್ಕೆ ಬಿದ್ದಿದ್ದರು. ಮುಖ, ಗಲ್ಲಕ್ಕೆ ಗುದ್ದಿದ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತನ್ನ ಪತ್ನಿ ವಿಕ್ಟೋರಿಯಾ ಮಥಾಯಿಸ್‌ಳೊಂದಿಗೆ ಮನೆ ಒಳಗೆ ಒಯ್ದು, ಮೈಮೇಲಿದ್ದ ಆಭರಣ ದೋಚಿ ನಂತರ ಕೊಲೆ ಮಾಡಿ ದೇಹವನ್ನು29 ತುಂಡು ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ನಗರದ ವಿವಿದೆಡೆ ಬಿಸಾಡಿದ್ದರು.
ಶ್ರೀಮತಿ ಅವರ ಮೈಮೇಲಿದ್ದ ಆಭರಣಗಳನ್ನು ಮರು ದಿನ ಗಂಡ– ಹೆಂಡತಿ ಇಬ್ಬರೂ 3ನೇ ಆರೋಪಿ ರಾಜುಗೆ ನೀಡಿದ್ದರು. ಕೊಲೆ ಮಾಡಿದ ವಿಷಯವನ್ನು ರಾಜುಗೆ ತಿಳಿಸಿದ್ದರೂ ರಾಜು, ಚಿನ್ನಾಭರಣ ಪಡೆದುಕೊಂಡು ಬಚ್ಚಿಟ್ಟಿದ್ದಲ್ಲದೇ ಅವರಿಗೆ ಆಶ್ರಯ ನೀಡಿದ್ದ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಎಂ. ಅವರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವೆನ್ಲಾಕ್ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ. ಜಗದೀಶ್ ರಾವ್ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು, ಈ ಮೂವರು ದೋಷಿತರು ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಮೇಲೆ ವಿಚಾರಣೆಯನ್ನು ಇದೇ 17ಕ್ಕೆ ನಿಗದಿ ಪಡಿಸಲಾಗಿದೆ.
ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.






