ರಾಜಕೀಯ

ಶೆಟ್ಟರ್ ಓಲೈಸಿ..ಮತ್ತೆ ಬಿಜೆಪಿಗೆ ಕರೆತರುವ ಕೆಲಸ  ಯಡಿಯೂರಪ್ಪ ಹೆಗಲಿಗೆ..!

Views: 96

ಬೆಂಗಳೂರು, – ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್‌ಶೆಟ್ಟರ್ ಮತ್ತೆ ಬಿಜೆಪಿಗೆ ಮರಳುತ್ತಾರೆ ಎಂಬುದು ಚರ್ಚೆಗೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಕರೆ ತಂದು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಾಯಕರು ಮುಂದಾಗಿದ್ದು, ಜಗದೀಶ್ ಶೆಟ್ಟರ್ ಅವರ ಮನವೊಲೈಸಲು ಬಿಜೆಪಿ ನಾಯಕರ ಒಂದು ತಂಡ ಮುಂದಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟರ್ ಅವರನ್ನು ಮತ್ತೆ ಬಿಜೆಪಿಗೆ ಕರೆ ತಂದು ಬೆಳಗಾವಿ ಲೋಕಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜಬೊಮ್ಮಾಯಿ ಆಸಕ್ತಿ ತೋರಿದ್ದು, ಶೆಟ್ಟರ್ ಅವರ ಜತೆ ಮಾತುಕತೆ ನಡೆಸಲು ಈ ನಾಯಕರು ಮುಂದಾಗಿದ್ದಾರೆ.

ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಬಿಜೆಪಿಗೆ ಕರೆತರುವ ಕೆಲಸವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಗಲಿಗೆ ವಹಿಸಲಾಗಿದೆ. ಈ ಬಗ್ಗೆ ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದ ಬಿಜೆಪಿ ಸರಣಿ ಸಭೆಗಳಲ್ಲೂ ಚರ್ಚೆ ನಡೆಸಲಾಗಿದ್ದು, ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನಕ್ಕೆ ಹಿರಿಯ ನಾಯಕರುಗಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆ ತರುವ ಪ್ರಯತ್ನಗಳು ಈಗ ನಡೆದಿವೆ.

ಶೆಟ್ಟರ್ ಅವರನ್ನು ಸಂಪರ್ಕಿಸಿ ಅವರ ಮನವೊಲಿಸುವ ಕೆಲಸವನ್ನು ಯಡಿಯೂರಪ್ಪ ಮಾಡಲಿದ್ದು, ಇವರಿಗೆ ಒತ್ತಾಸೆಯಾಗಿ ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಹ ಶೆಟ್ಟರ್ ಅವರ ಜತೆ ಮುಂದಿನ ದಿನಗಳಲ್ಲಿ ಮಾತುಕತೆ ನಡೆಸುವರು ಎಂದು ಹೇಳಲಾಗಿದೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್ ಸಿಗಲ್ಲ ಎಂಬುದು ಗೊತ್ತಾಗುತ್ತಿದ್ದಂತ್ತೆ ಬಿಜೆಪಿ ನಾಯಕರಿಗೆ ಸಡ್ಡು ಹೊಡೆದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಇದಾದ ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅವರನ್ನು ಕಾಂಗ್ರೆಸ್ ವಿಧಾನಪರಿಷತ್ ಸದಸ್ಯರನ್ನಾಗಿಸುವ ಮೂಲಕ ಅವರಿಗೆ ಸೂಕ್ತ ಸ್ಥಾನಮಾನ ನೀಡಿತ್ತು.

ಚುನಾವಣೆಯಲ್ಲಿ ಸೋತಿದ್ದರೂ ಶೆಟ್ಟರ್ ಅವರಿಗೆ ವಿಧಾನಪರಿಷತ್ ಸದಸ್ಯನನ್ನಾಗಿಸುವ ಮೂಲಕ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬಂದವರನ್ನು ಕಾಂಗ್ರೆಸ್ ಎಂದೂ ಕೈಬಿಡಲ್ಲ ಎಂಬ ಸಂದೇಶ ರವಾನಿಸಿದ್ದರು.

ಜಗದೀಶ್ ಶೆಟರ್ ಸಹ ತಾವು ಯಾವೇದೇ ಕಾರಣಕ್ಕೂ ಮತ್ತೆ ಬಿಜೆಪಿಗೆ ಹೋಗಲ್ಲ ಕಾಂಗ್ರೆಸ್‌ನಲ್ಲೆ ಉಳಿಯುತ್ತೇನೆ ಎಂದು ಸಾರಿದ್ದರು. ಆದರೆ ಲೋಕಸಭಾ ಚುನಾವಣೆಗಳು ಹತ್ತಿರವಾಗುತ್ತಿದಂತೆ ರಾಜ್ಯ ರಾಜಕೀಯದಲ್ಲಿ ಮತ್ತೆ ಚಟುವಟಿಕೆಗಳು ಬಿರುಸಾಗಿದ್ದು, ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಬಿಜೆಪಿಯಲ್ಲಿ ವಾತಾವರಣವೇ ಬದಲಾಗಿದ್ದು, ಪಕ್ಷ ಬಿಟ್ಟು ಹೋಗಿರುವವರನ್ನು ಮತ್ತೆ ಕರೆ ತರಬೇಕು ಎಂಬ ಚರ್ಚೆಗಳು ನಡೆದಿದ್ದು, ಅದರಂತೆ ಶೆಟ್ಟರ್ ಅವರನ್ನು ಪಕ್ಷಕ್ಕೆ ಕರೆ ತರುವ ಪ್ರಯತ್ನಗಳು ಆರಂಭವಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷ ಬಿಟ್ಟು ಹೋಗಿರುವ ಹಲವು ನಾಯಕರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಗಳು ಮತ್ತಷ್ಟು ಬಿರುಸಾಗಲಿವೆ ಎಂದು ಬಿಜೆಪಿ ಮೂಲಗಳು ಹೇಳಿವೆ.

Related Articles

Back to top button
error: Content is protected !!