ಶಿರೂರು ಗುಡ್ಡ ಕುಸಿತ: ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ

Views: 122
ಉತ್ತರ ಕನ್ನಡ :ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಸಂಭವಿಸಿರುವ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿದ್ದ 10 ಜನರ ಪೈಕಿ 7 ಜನರ ಶವಗಳನ್ನು ಈಗಾಗಲೇ ಹೊರತೆಗೆಯಲಾಗಿದೆ. ಉಳಿದವರ ಪತ್ತೆಗಾಗಿ ಜಂಟಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಗುಡ್ಡದ ಕೆಳಗೆ ಸಿಲುಕಿರುವವರನ್ನು ರಕ್ಷಿಸಲು ಭಾರತೀಯ ಶಸಸ್ತ್ರ ಪಡೆಗಳನ್ನು ನಿಯೋಜಿಸಬೇಕು ಎಂದು ಕೋರಿ ವಕೀಲರಾದ ಸಿ.ಜೆ.ಮಲೈಯಿಲ್ ಮತ್ತು ಕೆ.ಎಸ್.ಸುಭಾಷ್ಚಂದ್ರ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠಕ್ಕೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಹಾಯಕ ಸಾಲಿಸಿಟರ್ ಜನರಲ್ ಹೆಚ್.ಶಾಂತಿಭೂಷಣ್ ವಿವರ ನೀಡಿದರು.
ಈ ಸಂಬಂಧ ವಸ್ತುಸ್ಥಿತಿ ವರದಿ ಸಲ್ಲಿಸಿ, ರಕ್ಷಣಾ ಕಾರ್ಯಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಪ್ರಾಧಿಕಾರಗಳ ಮನವಿ ಮೇರೆಗೆ ಕಾಣೆಯಾಗಿರುವ ಟ್ರಕ್ ಮತ್ತು ಜನರ ಪತ್ತೆಗೆ ಭಾರತೀಯ ನೌಕಾ ಪಡೆಯ ಎರಡು ಡೈವಿಂಗ್ ತಂಡವನ್ನು ಜುಲೈ 19ರಿಂದ ನಿಯೋಜಿಸಲಾಗಿದೆ. ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ತಂಡವನ್ನೂ ಜುಲೈ 21ರಂದು ನಿಯೋಜನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಅಂಶವನ್ನು ಪರಿಗಣಿಸಿದ ಪೀಠ, ಮಣ್ಣಿನಡಿ ಸಿಲುಕಿರುವ ವ್ಯಕ್ತಿಗಳ ರಕ್ಷಣಾ ಕಾರ್ಯಾಚರಣೆ ಮತ್ತು ರಸ್ತೆಯ ಮೇಲಿರುವ ಕಲ್ಲು, ಮಣ್ಣು ತೆರವು ಕಾರ್ಯದ ಬಗ್ಗೆ ಹೆಚ್ಚಿನ ವಿವರ ಒಳಗೊಂಡ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಸಂಭವಿಸಿದ ಭೂ ಕುಸಿತದಿಂದ ಮಣ್ಣಿನಡಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪತ್ತೆಗೆ, ಹೆದ್ದಾರಿಯಯಲ್ಲಿ ಬಿದ್ದಿರುವ ಕಲ್ಲು, ಮಣ್ಣು ತೆರವುಗೊಳಿಸಲು 24 ಗಂಟೆ ಕಾಲ ನಿರಂತರವಾಗಿ ಸಾಧ್ಯವಿರುವ ಎಲ್ಲಾ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.