ಕರಾವಳಿ

ಶಿರೂರು ಗುಡ್ಡ ಕುಸಿತ: ಉಡುಪಿಯ ಮುಳುಗುತಜ್ಞ ಈಶ್ವರ ಮಲ್ಪೆ ತಂಡದಿಂದ ಹುಡುಕಾಟ

Views: 116

ಉತ್ತರ : ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ನಾಪತ್ತೆಯಾದ ಇನ್ನೂ ಮೂವರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ನದಿಯಲ್ಲಿ ಶೋಧಕ್ಕೆ ಇದೀಗ ಉಡುಪಿಯ ಈಶ್ವರ ಮಲ್ಪೆ ತಂಡದ ಸಹಾಯಯಾಚಿಸಿರುವ ಜಿಲ್ಲಾಡಳಿತ, ಲಾರಿ ಹಾಗೂ ಕಣ್ಮರೆಯಾದವರಿಗಾಗಿ ಹುಟುಕಾಟ ನಡೆಸುತ್ತಿದೆ.

ನದಿಯಲ್ಲಿ ನಾಲ್ಕು ಲೋಹದ ವಸ್ತುಗಳು ಇರುವುದು ಸ್ಕ್ಯಾನಿಂಗ್‌ನಲ್ಲಿ ಖಚಿತವಾಗಿದೆ. ಆದರೆ, ನೀರಿನ ಹರಿವಿನ ವೇಗ ಹೆಚ್ಚಿರುವ ಕಾರಣ ಸೇನೆ ಹಾಗೂ ನೌಕಾನೆಲೆಯ ಈಜು ತಜ್ಞರು ಹಿಂದೇಟು ಹಾಕಿದ್ದರು. ಆದರೆ, ಹಲವು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿರುವ ಉಡುಪಿಯ ಮುಳುಗು ತಜ್ಞ ಈಶ್ವರ ಮಲ್ಪೆ ತಂಡವು ಕಾರ್ಯಾಚರಣೆಗಿಳಿದಿದೆ.

ಈಗಾಗಲೇ ಸ್ಥಳಕ್ಕೆ ಆಗಮಿಸಿರುವ ತಂಡದ ಸದಸ್ಯರು, ಅಧಿಕಾರಿಗಳು ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಗಂಗಾವಳಿ ನದಿಗಿಳಿದಿದ್ದಾರೆ. ಸದ್ಯ‌ ನದಿಯಲ್ಲಿ ಗುರುತಿಸಿರುವ ನಾಲ್ಕು ಪಾಯಿಂಟ್ಗಳ ಬಗ್ಗೆ ಈಶ್ವರ ಮಲ್ಪೆ ತಂಡಕ್ಕೆ ಮಾಹಿತಿ ನೀಡಲಾಗಿದೆ. ಅದರಂತೆ ಆ್ಯಂಕರ್ ಹಾಕಿಕೊಂಡು ನೀರಿನ‌ ಆಳಕ್ಕೆ ಇಳಿದು ತಂಡದ ಸದಸ್ಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಹಿಂದೆಯೂ ನೀರಲ್ಲಿ ಮುಳುಗಿ ಹಲವರ ಶವ ಮೇಲೆತ್ತಲು ಕಾರ್ಯಾಚರಣೆ ಮಾಡಿರುವ ತಂಡ, ಇದೀಗ ಉಡುಪಿಯಿಂದ ಅಂಕೋಲಾದ ಶಿರೂರಿಗೆ ಆಗಮಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ., ”ಡ್ರೋನ್ ಸ್ಕ್ಯಾನಿಂಗ್ ತಂಡವು 4 ಸ್ಥಳಗಳನ್ನು ಗುರುತಿಸಿ ವರದಿ ನೀಡಿದೆ. ಈ ಪೈಕಿ ಒಂದು ಜಾಗದಲ್ಲಿ ಸ್ಟ್ರಾಂಗ್ ಸಿಗ್ನಲ್‌ಗಳನ್ನು ಗುರುತಿಸಿದೆ. ಇಂದು ಗೋವಾದಿಂದ ಬರಬೇಕಿದ್ದ ಫ್ಲೋಟಿಂಗ್ ಪ್ಲಾಟ್‌ಫಾರಂ ತಾಂತ್ರಿಕ ಕಾರಣದಿಂದ ಇನ್ನೂ ತಲುಪಿಲ್ಲ. ಪ್ಲಾಟ್‌ಫಾರಂ ಬೇರ್ಪಡಿಸಿ ತಂದು ಇಲ್ಲಿ ಮತ್ತೆ ಜೋಡಿಸಬೇಕಾಗುತ್ತದೆ. ಇಂದು ರಾತ್ರಿ ವೇಳೆಗೆ ಫ್ಲೋಟಿಂಗ್ ಪ್ಲಾಟ್‌ಫಾರಂ ತಜ್ಞರ ತಂಡ ಬಂದು ತಲುಪಲಿದೆ. ಹುಡುಕಾಟ ಪ್ರಯತ್ನವನ್ನು ಮುಂದುವರೆಸುತ್ತೇವೆ, ಕೈಬಿಡುವ ಪ್ರಶ್ನೆಯೇ ಇಲ್ಲ” ಎಂದು ಮಾಹಿತಿ ನೀಡಿದರು.

Related Articles

Back to top button