ಶಂಕರನಾರಾಯಣದ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ: ಸಾಂಸ್ಕೃತಿಕ ಸಪ್ತಸ್ವರ

Views: 49
ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಶಿಕ್ಷಣ ಸಂಸ್ಥೆ ಶಂಕರನಾರಾಯಣದಲ್ಲಿ ಸೆಪ್ಟೆಂಬರ್ 5 ರಂದು ಭಾರತ ಮಾಜಿ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ವೈವಿಧ್ಯಮಯವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಮುನ್ನುಡಿ ನೀಡಿದರು. ಕಾರ್ಯಕ್ರಮದ ಹಿನ್ನಲೆಯಲ್ಲಿ ಕಿರಿಯ ಪ್ರಾಥಮಿಕದಿಂದ ಹಿಡಿದು ಪದವಿ ಪೂರ್ವ ವಿಭಾಗದವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಇದನ್ನು ವಿಭಾಗವಾರು ತಂಡಗಳು ಅತ್ಯಂತ ಮನೋರಂಜಕವಾಗಿ ಹಾಗೂ ವಿನೋದಾತ್ಮಕವಾಗಿ ನಿರ್ವಹಿಸಿದವು. ವಿಶೇಷವಾಗಿ ಶಿಕ್ಷಕರು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಪ್ರದರ್ಶಿಸಿ, ಎಲ್ಲರ ಮನಸು ಗೆದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಹಾಗೂ ಪದವಿ ಪೂರ್ವ ವಿಭಾಗದ ತಂಡಗಳು ಸಮಾನ ಪೈಪೋಟಿಯಲ್ಲಿ ಪ್ರಥಮ ಬಹುಮಾನವನ್ನು ಪಡೆದು, ವಿಜೇತ ಟ್ರೋಫಿಯನ್ನು ಹಂಚಿಕೊಂಡುದು ಈ ದಿನದ ಪ್ರಮುಖ ಆಕರ್ಷಣೆ ಆಗಿತ್ತು. ಇದೇ ಸಂದರ್ಭದಲ್ಲಿ ಶಿಕ್ಷಕರಿಗಾಗಿ ವಿಭಿನ್ನ ಸ್ಪರ್ಧೆಗಳು – ಬುದ್ಧಿಮತ್ತೆ ಪರೀಕ್ಷೆ, ಕ್ರಿಯಾತ್ಮಕ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಟ್ರೋಫಿ ಹಾಗೂ ವೈಯಕ್ತಿಕ ವಿಜೇತರಿಗೆ ಪದಕಗಳು ನೀಡಲಾಯಿತು. ಇದಲ್ಲದೇ, ಎಲ್ಲ ಶಿಕ್ಷಕರಿಗೆ ಆಡಳಿತ ಮಂಡಳಿಯವರು ಕೃತಜ್ಞತೆಯ ಕಾಣಿಕೆಯನ್ನು ನೀಡುವ ಮೂಲಕ ಅವರ ಸೇವೆಗೆ ಗೌರವ ಸಲ್ಲಿಸಲಾಯಿತು. ಶಿಕ್ಷಕರ ಸ್ಮರಣೆಯ ದಿನವಿದು ಕೇವಲ ಆಚರಣೆಯಷ್ಟೆ ಅಲ್ಲ – ಅವರು ಮಾಡುತ್ತಿರುವ ಸೇವೆಯ ಮಹಿಮೆ ಮೆರೆದ ದಿನವೂ ಹೌದು ಹಾಗೂ ಶಿಕ್ಷಕರಲ್ಲಿ ಅಡಗಿರುವ ಸುಪ್ತವಾದ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯು ಆಯಿತು. ಈ ಅತ್ಯುನ್ನತ ಹಾಗೂ ಅರ್ಥಪೂರ್ಣ ಕಾರ್ಯಕ್ರಮದ ಸಮಗ್ರ ನಿರ್ವಹಣೆಯನ್ನು ಸಂಸ್ಥೆಯ ಭಾಷಾ ಹಾಗೂ ಸಾಂಸ್ಕೃತಿಕ ನಿರ್ದೇಶಕಿ ಅಲಿಟಾ ಡೇಸ ಅವರು ನೆರವೇರಿಸಿದರು.