ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಸಾವು :ವೈದ್ಯರು ಆಸ್ಪತ್ರೆಯಿಂದ ಪರಾರಿ

Views: 175
ಬೆಂಗಳೂರು:ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸಂಪಂಗಿ ರಾಮನಗರದಲ್ಲಿ ನಡೆದಿದೆ.
ಆಡನ್ ಮೈಕಲ್ ಮೃತಪಟ್ಟಿರುವ ದುರ್ದೈವಿ ಬಾಲಕ
ಮಗು ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆ ವೈದ್ಯರು ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.
ಆಡನ್ ಮೈಕಲ್ಗೆ ಊಟ ಮಾಡುವಾಗ ಗಂಟಲು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಪೋಷಕರು ಮಗನನ್ನು ಸಿಂಧ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದರು. ಈ ವೇಳೆ ವೈದ್ಯರು ಮಗುವಿಗೆ ಆಪರೇಷನ್ ಮಾಡಬೇಕು ಎಂದಿದ್ದು ಆಪರೇಷನ್ ವೇಳೆ ಡಾ.ಶ್ವೇತಾ ಪೈ ಎಂಬುವವರು ಬಾಲಕನಿಗೆ ಅನೆಸ್ತೇಷಿಯಾ ಕೊಟ್ಟಿದ್ದರು. ಅನಸ್ತೇಷಿಯಾ ನೀಡಿದ ಬಳಿಕ ಬಾಲಕ ಸಾವನ್ನಪ್ಪಿದ್ದಾನೆ. ಆದರೆ ಈ ವಿಷಯವನ್ನು ವೈದ್ಯರು ಪೋಷಕರಿಗೆ ತಿಳಿಸಿಲ್ಲ. ಬದಲಿಗೆ ಮಗುವಿಗೆ ಹೃದಯ ಸಮಸ್ಯೆಯಿದೆ ಅಂತಾ ನಾಟಕವಾಡಿದ್ದಾರೆ. ಈ ವಿಚಾರ ಪೋಷಕರಲ್ಲಿ ಅನುಮಾನ ಹುಟ್ಟಿಹಾಕಿದ್ದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ವೇಳೆ ಮಗು ಮೃತಪಟ್ಟಿದ್ದು ಬಯಲಾಗಿದೆ.
ಅನಸ್ತೇಷಿಯಾ ಓವರ್ ಡೋಸ್ ಆಗಿ ನನ್ನ ಮಗ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಮಗು ಸತ್ತಿದೆ ಅಂತಾ ಕಿಡಿಕಾರಿದ್ದಾರೆ. ನಮಗಾದ ನೋವು ಯಾರಿಗೂ ಆಗಬಾರದು, ನ್ಯಾಯ ಕೊಡಿಸಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಮಗು ಕಳೆದುಕೊಂಡು ತಾಯಿ, ತಂದೆ ಸಂಬಂಧಿಕರ ನೋವು ಮುಗಿಲು ಮುಟ್ಟಿದೆ.






