ಕುಂದಾಪುರ:ದೇವಸ್ಥಾನ,ಮನೆ ಕಳ್ಳತನ ನಡೆಸಿ ಹುಲಿಕಲ್ ಘಾಟಿಯಲ್ಲಿ ಬೈಕ್ ನಿಲ್ಲಿಸಿ ಕಾಡಿನಲ್ಲಿ ಪರಾರಿಯಾದ ಕಳ್ಳರಿಗಾಗಿ ಹುಡುಕಾಟ!
Views: 32
ಕನ್ನಡ ಕರಾವಳಿ ಸುದ್ದಿ: ಕುಳಂಜೆ ಗ್ರಾಮದ ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಆಮಾಸೆಬೈಲು ಪೊಲೀಸ್ ಠಾಣೆ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ಜಾಂಬ್ಲಿ ಜೆಡ್ಡು ಆಶಾ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆದಿತ್ತು.
ಕಳ್ಳತನ ಸುದ್ದಿ ತಿಳಿದ ತತ್‌ಕ್ಷಣ ಅಮಾಸೆಬೈಲು ಶಂಕರನಾರಾಯಣ ಎರಡೂ ಠಾಣೆಯ ಪಿಎಸ್‌ಐಗಳು ಜಂಟಿಯಾಗಿ ಕಾರ್ಯಪ್ರವೃತ್ತರಾಗಿ ಸಿಸಿ ಕೆಮರಾವನ್ನು ಪರಿಶೀಲನೆ ಮಾಡಿದ್ದು ಇಬ್ಬರು ಕಳ್ಳರು ಬೈಕಿನಲ್ಲಿ ಬಂದು ಕಳ್ಳತನ ನಡೆಸಿದ್ದು ಬೆಳಕಿಗೆ ಬಂದಿದೆ.
ಸಿಸಿ ಕೆಮರಾದ ಆಧಾರದಲ್ಲಿ ಪೊಲೀಸರು ಕಳ್ಳರ ಜಾಡು ಹಿಡಿದು ಹೋದಾಗ ಕಳ್ಳರು ಹುಲಿಕಲ್ ಘಾಟಿಯಲ್ಲಿ ಬೈಕನ್ನು ಬಿಟ್ಟು ಕಾಡಿನಲ್ಲಿ ಪರಾರಿಯಾದರು ಎನ್ನಲಾಗಿದೆ. ಬೈಕಿನಲ್ಲಿ ನಂಬರ್‌ಪ್ಲೆಟ್ ಇದ್ದಿರಲಿಲ್ಲ. ಇತರ ದಾಖಲೆ ನೋಡಿದಾಗ ಬೈಕ್ ಬಳ್ಳಾರಿ ಭಾಗದ್ದು ಎಂದು ಗೊತ್ತಾಗಿದೆ. ಇದೂ ಕಳವು ಮಾಡಿ ತಂದಿರುವ ಬೈಕೋ ಎಂಬುದು ಇನ್ನಷ್ಟೇ ದೃಢ ಪಡಬೇಕಾಗಿದೆ. ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ಮಚ್ಚಟ್ಟು ಗ್ರಾಮದ ಜಾಂಬ್ಲಿಜೆಡ್ಡು ಆಶಾ ಶೆಟ್ಟಿ ಅವರ ಮನೆಯಿಂದ ಸುಮಾರು ಸುಮಾರು 97 ಸಾವಿರ ರೂ. ಕಳವಾಗಿತ್ತು. ಮುಂಡುಕೋಡು ಶ್ರೀ ಜಲದುರ್ಗಾ ಪರಮೇಶ್ವರಿ ದೇವಸ್ಥಾನದಿಂದ ಕಾಣಿಕೆ ಡಬ್ಬದಿಂದ ಹಣ ಕದಿಯಲಾಗಿತ್ತು. ಎರಡೂ ಘಟನೆಗಳು ಹಗಲು ಹೊತ್ತಲ್ಲೇ ನಡೆದಿತ್ತು ಎಂದು ತಿಳಿದುಬಂದಿದೆ.






