ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯ

Views: 2
ಕರ್ನಾಟಕದ ಹೆಮ್ಮೆಯ ಬೇಲೂರು ಚನ್ನಕೇಶವ ದೇವಾಲಯ, ಹಳೆಬೀಡು ಹೊಯ್ಸಳೇಶ್ವರ ದೇವಾಲಯ ಮತ್ತು ಸೋಮನಾಥಪುರದ ಚನ್ನಕೇಶವ ದೇವಾಲಯಗಳು ಇದೀಗ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಯುನೆಸ್ಕೋ ಟ್ವೀಟ್ ಅನ್ನು ಮರುಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಪ್ರಹ್ಲಾದ ಜೋಶಿ, ರಾಜೀವ ಚಂದ್ರಶೇಖರ್, ನಳಿನ್ ಕಟೀಲ್ ಸೇರಿ ಅನೇಕ ಗಣ್ಯರಿಂದ ಸಂತಸ
ಬೆಂಗಳೂರು: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇದೀಗ ಕರ್ನಾಟಕದ ಹೊಯ್ಸಳರ ಕಾಲದ ದೇವಾಲಯಗಳನ್ನು ಸೇರ್ಪಡೆಗೊಳಿಸಲಾಗಿದೆ. ಹೀಗಾಗಿ ಹಾಸನ ಜಿಲ್ಲೆಯಲ್ಲಿರುವ ಬೇಲೂರು, ಹಳೇಬೀಡು ಮತ್ತು ಮೈಸೂರು ಜಿಲ್ಲೆಯಲ್ಲಿರುವ ಸೋಮನಾಥಪುರ ದೇವಾಲಯಗಳಿಗೆ ಯುನೆಸ್ಕೋ ವಿಶ್ವ ಪರಂಪರೆಯ ಸ್ಥಾನಮಾನಗಳನ್ನು ನೀಡಿದೆ.
ಈ ಬಗ್ಗೆ ಯುನಸ್ಕೋದ ಅಧಿಕೃತ ಟ್ವೀಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಸೋಮನಾಥಪುರದ ದೇವಾಲಯದ ಚಿತ್ರದೊಂದಿಗೆ “ಹೊಯ್ಸಳರ ಪವಿತ್ರ ಸ್ಥಳಗಳು, ಭಾರತ, ಅಭಿನಂದನೆಗಳು” ಎಂದು ಬರೆಯಲಾಗಿದೆ.
ಬೇಲೂರಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನಗಳು ಹೊಯ್ಸಳರ ದೊರೆ ವಿಷ್ಣುವರ್ಷನ ಆಡಳಿತಾವಧಿಯಲ್ಲಿ( ಕ್ರಿಶ 1110ರಿಂದ 1142) ನಿರ್ಮಾಣಗೊಂಡಿವೆ. ಇನ್ನು ಹಳೇಬೀಡು ಸೋಮನಾಥಪುರದ ಚನ್ನಕೇಶವ ದೇವಾಲಯವು ಹೊಯ್ಸಳರ ದೊರೆಯಾದ ಮೂರನೇಯ ನರಸಿಂಹನ ಕಾಲದಲ್ಲಿ ದಂಡನಾಯಕನಾಗಿದ್ದ ಸೋಮನಾಥ ಎಂಬಾತನಿಂದ 1268 ರಲ್ಲಿ ನಿರ್ಮಾಣಗೊಂಡಿದೆ. ಈ ತಾಣಗಳು ಈ ಹಿಂದೆ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿದ್ದವು. ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ.
ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಭಾರತಕ್ಕೆ ಮತ್ತಷ್ಟು ಹೆಮ್ಮೆ! ಹೊಯ್ಸಳರ ಭವ್ಯ ಮತ್ತು ಪವಿತ್ರ ಶಿಲ್ಪ ಸಂಕೀರ್ಣಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೊಯ್ಸಳ ದೇವಾಲಯಗಳ ಕಾಲಾತೀತ ಸೌಂದರ್ಯ ಮತ್ತು ಸೂಕ್ಷ್ಮ ಕುಸುರಿ ಕೆಲಸಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಮ್ಮ ಪೂರ್ವಿಕರ ಅಸಾಧಾರಣ ಶಿಲ್ಪ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.” ಎಂದು ಹೇಳಿದ್ದಾರೆ. ಅವರ ಈ ಟ್ವೀಟ್ ಅನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ರಾಜೀವ್ ಚಂದ್ರಶೇಖರ್. ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಅವರು ಮರುಟ್ವೀಟ್ ಮಾಡಿದ್ದಾರೆ.
ಇನ್ನು ಈ ವಿದ್ಯಮಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಕೂಡ. ನಾಡಿನ ಪ್ರವಾಸಿ ತಾಣಗಳಿಗೆ ಭೇಟಿನೀಡುವ ಪ್ರವಾಸಿಗರಿಗೆ ವಿಶ್ವಮಟ್ಟದ ಮೂಲಸೌಲಭ್ಯ ಮತ್ತು ಸುರಕ್ಷತೆ ಒದಗಿಸಲು ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಐತಿಹಾಸಿಕ ಸ್ಥಳಗಳು ಮತ್ತು ಪುಣ್ಯಕ್ಷೇತ್ರಗಳ ತೊಟ್ಟಿಲು ಕರ್ನಾಟಕಕ್ಕೆ ಸ್ವಾಗತ.” ಎಂದಿದ್ದರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಹ ಟ್ವೀಟ್ ಮಾಡಿದ್ದು, “ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳ ದೇವಾಲಯಗಳಿಗೆ ಯುನೆಸ್ಕೋ ವಿಶ್ವ ಪರಂಪರೆಯ ಮಾನ್ಯತೆ ನೀಡಿರುವುದನ್ನು ನೋಡಲು ಸಂತೋಷ ಮತ್ತು ಹೆಮ್ಮೆಯಿದೆ. ಸ್ಮಾರಕಗಳು ರಾಷ್ಟ್ರದ ಶ್ರೀಮಂತ ಸಂಸ್ಕೃತಿ ಮತ್ತು ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಪ್ರಧಾನಮಂತ್ರಿಗೆ ಮತ್ತು ಯುನೆಸ್ಕೋ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ.” ಎಂದಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, “ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ನಮ್ಮ ಕರುನಾಡಿನ ಹೊಯ್ಸಳ ದೇವಾಲಯಗಳು. ರಾಜ್ಯದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಎಂದು ಘೋಷಿಸಿದ್ದು ಹೆಮ್ಮೆಯ ಸಂಗತಿ. ಇದಕ್ಕೆ ಕಾರಣಣಾದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಧನ್ಯವಾದಗಳು.” ಎಂದು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.