ವಿಷ ಸೇರಿಸಿ ಪತ್ನಿ ಕೊಲ್ಲಲು ಮೂರು ಬಾರಿ ಯತ್ನ ವಿಫಲ: ಕೊನೆಗೆ ಪತಿ ಮಾಡಿದ್ದೇ ಖತರ್ನಾಕ್ ಐಡಿಯಾ!
Views: 65
ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಆಹಾರಕ್ಕೆ ವಿಷ ಬೆರೆಸಿ ಮೂರು ಬಾರಿ ಕೊಲ್ಲಲು ಯತ್ನಿಸಿದ್ದಾನೆ. ಆದರೆ ಅವನು ಪ್ರತಿಸಲವೂ ವಿಫಲವಾದಾಗ ಹಿಟ್‌ಮ್ಯಾನ್‌ನನ್ನು ನೇಮಿಸಿ 1 ಲಕ್ಷ ರುಪಾಯಿ ಸುಪಾರಿ ನೀಡಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬುಲ್ದಾನದಲ್ಲಿ ನಡೆದಿದೆ.
ಅಪಘಾತದಂತೆ ಬಿಂಬಿಸಿ ಅವಳನ್ನು ಹತ್ಯೆ ಮಾಡಿದ್ದಾನೆ ಪತ್ನಿಯ ಕೊಲೆಗೆ ಸುಪಾರಿ ನೀಡಿದ ವ್ಯಕ್ತಿಯನ್ನು ಪ್ರಕಾಶ್ ಗವಾಂಡೆ ಎಂದು ಗುರುತಿಸಲಾಗಿದೆ. ಶಿಕ್ಷಕಿಯಾಗಿದ್ದ ಪತ್ನಿ ವೃಶಾಲಿ ಕೊಲೆಗೀಡಾದ ಮಹಿಳೆ.
ಮಾರ್ಚ್ 2ರಂದು ಈ ಘಟನೆ ನಡೆದಿದ್ದು, ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಬಿಳಿ ಬಣ್ಣದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣ ಅಪಘಾತದಂತೆ ಕಂಡುಬಂತು. ಆದರೆ ತನಿಖೆಯ ಸಮಯದಲ್ಲಿ ಮಹಿಳೆಗೆ ಡಿಕ್ಕಿ ಹೊಡೆಸಿದ MH 28 BB 5753 ನಂಬರ್ ಪ್ಲೇಟ್ ಹೊಂದಿರುವ ಕಾರಿನ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು.
ಆ ಕಾರು ಮನೀಶ್ ಸೂರ್ಯವಂಶಿ ಎಂಬ ವ್ಯಕ್ತಿಗೆ ಸೇರಿದ್ದು ಎನ್ನುವುದುದನ್ನು ಬಳಿಕ ಪೊಲೀಸರು ಕಂಡುಕೊಂಡರು. ನಂತರ ಆತನನ್ನು ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಸೂರ್ಯವಂಶಿಯು ಪ್ರಕಾಶ್ ತನ್ನ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದನ್ನು ಬಾಯ್ಬಿಟ್ಟಿದ್ದ.
ಪ್ರಕಾಶ್ ಪತ್ನಿಯನ್ನು ಕೊಲ್ಲಲು ಮಂಗೇಶ್ ಚುಲ್ಕರ್ ಎಂಬಾತನನ್ನು 1 ಲಕ್ಷ ರುಪಾಯಿಗೆ ನೇಮಿಸಿಕೊಂಡಿದ್ದ. ಚುಲ್ಕರ್ ಬಂಧಿತ ಚಾಲಕ ಸೂರ್ಯವಂಶಿಯನ್ನು ಆಕೆಯ ವಾಹನಕ್ಕೆ ಡಿಕ್ಕಿ ಹೊಡೆಯಲು ತಿಳಿಸಿದ್ದ. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಅಪರಾಧದ ಹಿಂದೆ ಕೌಟುಂಬಿಕ ಕಲಹ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






