ವಿದ್ಯುತ್ ಶಾಕ್,ಬಲವಾದ ಹೊಡೆತ,ಆಂತರಿಕ ರಕ್ತಸ್ರಾವದಿಂದ ರೇಣುಕಾಸ್ವಾಮಿ ಸಾವು:ಮರಣೋತ್ತರ ವರದಿ ಬಹಿರಂಗ

Views: 272
ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್ನಿಂದ ಕ್ರೂರ ಹಲ್ಲೆಗೊಳಗಾಗಿ ಮೃತಪಟ್ಟಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದ ಮರಣೋತ್ತರ ಪರೀಕ್ಷಾ ವರದಿ ಬಯಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಆರೋಪಿಗಳನ್ನು ಹಾಜರುಪಡಿಸುವಾಗ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧಪಡಿಸಿರುವ ರಿಮ್ಯಾಂಡ್ ಅರ್ಜಿಯ ಪ್ರತಿ ಲಭ್ಯವಾಗಿದ್ದು, ಅದರಲ್ಲಿ ರೇಣುಕಾಸ್ವಾಮಿಯ ಸಾವಿಗೆ ವೈದ್ಯರು ನೀಡಿರುವ ಕಾರಣದ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ರೇಣುಕಾಸ್ವಾಮಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಸಲ್ಲಿಸಿರುವ ವರದಿಯಲ್ಲಿ ಶಾಕ್ ಹಾಗೂ ಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎಂಬ ವಿಚಾರವನ್ನು ವರದಿಯನ್ನು ವೈದ್ಯರು ನೀಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಿರುವ ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.
ರೇಣುಕಾಸ್ವಾಮಿಯ ಹತ್ಯೆ ನಡೆದ ಪಟ್ಟಣಗೆರೆಯ ಶೆಡ್ ಕಾವಲು ಕಾಯುವ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ವಿಚಾರಣೆ ನಡೆಸಿದ್ದ ಪೊಲೀಸರು CRPC – 164ರ ಅಡಿ ನ್ಯಾಯಾಲಯದಲ್ಲಿ ಆತನ ಹೇಳಿಕೆ ದಾಖಲಿಸಿದ್ದಾರೆ. ಹಿಂದಿ ಭಾಷೆ ಮಾತಾನಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಹೇಳಿಕೆಯನ್ನು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ಸಹಾಯದಿಂದ ಭಾಷಾಂತರಿಸಲಾಗಿದ್ದು, ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದೆ ಎಂಬ ಅಂಶವನ್ನು ಪೊಲೀಸರು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.






