ವಿಡಿಯೋ ಕರೆಯಲ್ಲಿದ್ದಾಗಲೇ ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆ
Views: 67
ಕನ್ನಡ ಕರಾವಳಿ ಸುದ್ದಿ: ಶ್ರೀಲಂಕಾ ಮೂಲದವರಾದ ಸುಭಾಷಿಣಿ ಅವರು ತಮ್ಮ ಪತಿ ಪಿಪ್ಪಿನ್ ಅವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪ್ರಸ್ತುತ ‘ಕಯಲ್’ ಧಾರಾವಾಹಿಯ ಚಿತ್ರೀಕರಣದ ಕಾರಣಕ್ಕಾಗಿ ಚೆನ್ನೈನ ಅಯ್ಯಪ್ಪಂತಂಗಲ್‌ನಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಅಲ್ಲಿಯೇ ಈ ಘಟನೆ ನಡೆದಿದೆ.

ಮಾಹಿತಿಯ ಪ್ರಕಾರ, ನಿನ್ನೆ ರಾತ್ರಿ ಸುಭಾಷಿಣಿ ಅವರು ತಮ್ಮ ಪತಿಯೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ದಂಪತಿಗಳ ನಡುವೆ ತೀವ್ರ ಮಾತಿನ ಚಕಮಕಿ ಉಂಟಾಗಿತ್ತು ಎನ್ನಲಾಗಿದೆ. ಅಲ್ಲದೆ, ಇಬ್ಬರ ನಡುವೆ ಕೌಟುಂಬಿಕ ಕಲಹಗಳು ಇದ್ದವು ಎಂದು ವರದಿಯಾಗಿದೆ. ವಿಡಿಯೋ ಕರೆಯಲ್ಲಿದ್ದಾಗಲೇ ಮನನೊಂದ ನಟಿ ದುಡುಕಿ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೋರೂರು ಪೊಲೀಸರು ಸ್ಥಳಕ್ಕೆ ಧಾವಿಸಿ, ಸುಭಾಷಿಣಿ ಅವರ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ನಿಖರ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿರುತ್ತಿದ್ದ ನಟಿಯ ಈ ದಿಢೀರ್ ಸಾವು ಅವರ ಅಭಿಮಾನಿ ಬಳಗ ಮತ್ತು ಸಹ ಕಲಾವಿದರಿಗೆ ಶಾಕ್ ನೀಡಿದೆ. ಒಟ್ಟಾರೆಯಾಗಿ ಈ ಪ್ರಕರಣ ತನಿಖೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಟಿಯ ಸಾವಿಗೆ ನಿಖರ ಕಾರಣವೇನು ಎಂಬುವುದು ತಿಳಿದು ಬರಬೇಕಿದೆ..






