ರಾಜಕೀಯ

ಲೋಕ ಸಭೆಯಲ್ಲಿ ಭದ್ರತಾ ಲೋಪ: 8 ಮಂದಿ ಸಸ್ಪೆಂಡ್

Views: 2

ನವದೆಹಲಿ:ಲೋಕಸಭೆಯಲ್ಲಿ ನಿನ್ನೆ ನಡೆದ ಘಟನೆಯ ತನಿಖೆ ಚುರುಕುಗೊಂಡಿದ್ದು, ಭದ್ರತಾಲೋಪದ ಬಗ್ಗೆ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗಿರುವಾಗಲೇ ಲೋಕಸಭಾ ಸಚಿವಾಲಯದ 8 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಹಾಗೆಯೇ ಪ್ರಧಾನಿ ನರೇಂದ್ರಮೋದಿ ಅವರೂ ಸಹ ಭದ್ರತಾಲೋಪದ ಸಂಬಂಧ ಹಿರಿಯ ಸಚಿವರುಗಳ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ. ಘಟನೆಯ ಬಗ್ಗೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಆಗ್ರಹಿಸಿವೆ. ಲೋಕಸಭೆಯಲ್ಲಿ ನಿನ್ನೆ ನಡೆದ ಘಟನೆಗೆ ಭದ್ರತಾಲೋಪವೇ ಕಾರಣ ಎಂದು ಹೇಳಲಾಗಿದ್ದು, ಲೋಕಸಭೆಯ 7 ಸಿಬ್ಬಂದಿಗಳನ್ನು ಅಮಾನತು ಮಾಡಿ ಲೋಕಸಭಾ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಇಂದು ಲೋಕಸಭೆ ಆರಂಭವಾಗುತ್ತಿದ್ದಂತೆಯೇ ನಿನ್ನೆಯ ಭದ್ರತಾಲೋಪ ವಿಚಾರ ಉಭಯ ಸದನಗಳಲ್ಲೂ ಪ್ರಸ್ತಾಪವಾಯಿತು. ಆಡಳಿತ ಪ್ರತಿಪಕ್ಷಗಳ ನಡುವೆ ಕೋಲಾಹಲ ಉಂಟಾಗಿದ್ದರಿಂದ ಎರಡೂ ಸದನಗಳನ್ನು ಮುಂದೂಡಲಾಗಿದೆ.ಲೋಸಕಭೆಯಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ಭದ್ರತಾಲೋಪ ಉಂಟಾಗಿರುವುದು ದೇಶಾದ್ಯಂತ ತಲ್ಲಣಕ್ಕೆ ಕಾರಣವಾಗಿದೆ. ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲೇ ಪ್ರೇಕ್ಷಕರ ಗ್ಯಾಲರಿಯಿಂದ ಲೋಕಸಭೆಗೆ ನುಗ್ಗಿ ಹೊಗೆ ಬಾಂಬ್ ಸಿಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಹಾಗೂ ತನಿಖಾ ಸಂಸ್ಥೆಗಳು ತನಿಖೆಯನ್ನು ಚುರುಕುಗೊಳಿಸಿವೆ.ಈಗಾಗಲೇ ಉನ್ನತ ಮಟ್ಟದ ತನಿಖೆಗೆ ಲೋಕಸಭಾ ಸ್ಪೀಕರ್ ಓಂಬಿರ್ಲಾ ಆದೇಶಿಸಿದ್ದು, ಭದ್ರತಾ ಲೋಪ ಉಂಟಾದ ಬಳಿಕ ಪರಿಸ್ಥಿತಿ ಪರಾಮರ್ಶೆಗೆ ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಸಂಸತ್ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡಗಳು ಘಟನಾ ಸ್ಥಳದಲ್ಲಿ ಸಾಕ್ಷಿಗಳನ್ನು ಸಂಗ್ರಹಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದೆ.ಮಣಿಪುರ ಬಿಕ್ಕಟ್ಟು, ರೈತರ ಪ್ರತಿಭಟನೆ, ನಿರುದ್ಯೋಗ ಸಮಸ್ಯೆಗಳಿಂದ ಬೇಸತ್ತು ಸಂಸತ್ ಭವನದೊಳಗೆ ಮತ್ತು ಹೊರಗೆ ಹೊಗೆ ಬಾಂಬ್ ಸಿಡಿಸಿದ್ದೇವೆ ಎಂದು ಬಂಧಿತನಲ್ಲಿ ಒಬ್ಬನಾಗಿರುವ ಅಮೋಲ್ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಮಹಾರಾಷ್ಟ್ರದ ಲಾಥೋರ್ ನಿವಾಸಿಯಾಗಿರುವ ಈತ ಪದವೀಧರನಾಗಿದ್ದು, ನಿರುದ್ಯೋಗಿಯಾಗಿದ್ದಾನೆ. ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ 1500 ರೂ. ಮೌಲ್ಯದ 5 ಬಣ್ಣದ ಹೊಗೆ ಡಬ್ಬಿಗಳನ್ನು ಖರೀದಿಸಿರುವ ವಿಷಯವನ್ನು ವಿಚರಣೆ ವೇಳೆ ಬಹಿರಂಗಪಡಿಸಿದ್ದಾನೆ.ಈ ಮಧ್ಯೆ ಹೊಸ ಸಂಸತ್ ಕಟ್ಟಡದಲ್ಲಿ ಭದ್ರತಾಲೋಪ ಉಂಟಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದಲ್ಲಿ ಹಿರಿಯ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿ ಸಂಸತ್ತಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಿದ್ದಾರೆ.

ಈ ಸಭೆಯಲ್ಲಿ ಹಿರಿಯ ಸಚಿವರಾದ ಅಮಿತ್ ಶಾ, ಪ್ರಲ್ಹಾದ್ ಜೋಷಿ, ಪಿಯೂಷ್ ಗೋಯಲ್, ಅನುರಾಗ್ ಠಾಕೂರ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗವಹಿಸಿದ್ದರು.ಸಂಸತ್ತಿನಲ್ಲಿ ಭದ್ರತಾ ಲೋಪ ಉಂಟಾಗಿರುವ ಬೆನ್ನಲ್ಲೆ ಇದನ್ನೇ ಪ್ರಮುಖ ಅಸ್ತ್ರವನ್ನಾಗಿರಿಸಿಕೊಂಡು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಕೇಂದ್ರದ ವಿರುದ್ಧ ಸಮರ ಸಾರಲು ಮುಂದಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ನೇತೃತ್ವದಲ್ಲಿಂದು ಇಂಡಿಯಾ ಮೈತ್ರಿಕೂಟದ ಮುಖಂಡರು ಸೇರಿ ಮುಂದೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.

ದೊಡ್ಡ ಪ್ರಮಾಣದಲ್ಲಿ ಭದ್ರತಾ ವೈಫಲ್ಯವಾಗಿರುವ ಬಗ್ಗೆ ಕೇಂದ್ರ ಸರ್ಕಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಉತ್ತರ ನೀಡಬೇಕೆಂಬ ಒತ್ತಾಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಂಸದ ಪ್ರತಾಪ್‌ಸಿಂಹ ಹೆಸರಿನಲ್ಲಿ ಮನೋರಂಜನ್ ಹಾಗೂ ಸಾಗರ್‌ಶರ್ಮಾ ಅವರಿಗೆ ಪಾಸ್ ನೀಡಿದ್ದಾರೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಸದನದಲ್ಲಿ ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷಗಳು ಮೈತ್ರಿಕೂಟ ಸಭೆಯಲ್ಲಿ ಕಾರ್ಯತಂತ್ರ ರೂಪಿಸಿವೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂಡಿಯಾ ಮೈತ್ರಿಕೂಟದ ನಾಯಕರುಗಳು ರಾಷ್ಟ್ರಪತಿ ಅವರ ಕದ ತಟ್ಟಲು ಮುಂದಾಗಿದ್ದು, ದೊಡ್ಡ ಪ್ರಮಾಣದಲ್ಲಿ ಭದ್ರತಾಲೋಪವಾಗಿರುವ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ಸಲ್ಲಿಸಲು ಇಂಡಿಯಾ ಮೈತ್ರಿಕೂಟ ನಾಯಕರುಗಳು ಮುಂದಾಗಿದ್ದಾರೆ.

ಮೈಸೂರಿನಲ್ಲಿ ರೂಪುರೇಷೆ ನಡೆಯಿತಾ?

ಆರೋಪಿಗಳು ಒಂದೂವರೆ ವರ್ಷಗಳ ಹಿಂದೆ ಮೈಸೂರಿನಲ್ಲಿ ಭೇಟಿಯಾಗಿ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದರು. ಸುಮಾರು ಒಂಬತ್ತು ತಿಂಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣದ ಬಳಿ ನಡೆದ ರೈತರ ಪ್ರತಿಭಟನೆ ಸಂದರ್ಬದಲ್ಲೂ ಇವರೆಲ್ಲ ಭೇಟಿಯಾಗಿ ಮಾತನಾಡಿದ್ದರು ಎನ್ನಲಾಗಿದೆ.

ಆರೋಪಿಗಳಲ್ಲಿ ಒಬ್ಬರಾದ ಸಾಗರ್ ಶರ್ಮಾ, ಜುಲೈನಲ್ಲಿ ಲಕ್ನೋದಿಂದ ದೆಹಲಿಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಭೇಟಿಯ ಸಮಯದಲ್ಲಿ, ಸಂಸತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ, ಆದರೆ ಭದ್ರತಾ ತಪಾಸಣೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಒಳಗೆ ಹೋಗುವ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ

ಅಮೋಲ್ ಶಿಂಧೆ, ಮಹಾರಾಷ್ಟ್ರದ ತನ್ನ ಸ್ವಂತ ಊರಿನಿಂದ ಹೊಗೆ ಡಬ್ಬಿ ತಂದಿದ್ದಾನೆ. ನಿನ್ನೆ ಇಂಡಿಯಾ ಗೇಟ್‌ನಲ್ಲಿ ನಡೆದ ಸಭೆಯಲ್ಲಿ ಗುಂಪಿನ ಸದಸ್ಯರ ನಡುವೆ ಡಬ್ಬಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ

ಲೋಕಸಭೆಯಲ್ಲಿ ಭದ್ರತಾಲೋಪ ಉಲ್ಲಂಘನೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿತರಾದ ನಾಲ್ವರು ಹಾಗು ಆಶ್ರಯ ನೀಡಿದ ಇಬ್ಬರು ಆರೋಪಿಗಳು ಸೇರಿದಂತೆ 6 ಮಂದಿ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ -ಯುಎಪಿಎ ಜೊತೆಗೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲು ಮಾಡಲಾಗಿದೆ.

ಬಂಧಿತ ನಾಲ್ವರು ಆರೋಪಿಗಳನ್ನು ದೆಹಲಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಬಂಧಿತ ನಾಲ್ವರಲ್ಲಿ ಲೋಕಸಭೆಯ ಸಭಾಂಗಣದಲ್ಲಿ ಹಳದಿ ಹೊಗೆ ಡಬ್ಬಿಗಳನ್ನು ಬಳಸಿದ ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಕೆಂಪು ಮತ್ತು ಹಳದಿ ಡಬ್ಬಿ ಸಿಡಿಸಿದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಿಬ್ಬರು ಆರೋಪಿಗಳಾದ ಗುರುಗ್ರಾಮ್ ಮೂಲದ ಲಲಿತ್ ಝಾ ಮತ್ತು ವಿಕ್ಕಿ ಶರ್ಮಾ ಇತರ ಆರೋಪಿಗಳು. ಇತರ ಆರೋಪಿಗಳು ಹೊಗೆ ಡಬ್ಬಿಗಳನ್ನು ಹೊರಗೆ ಹಾಕುತ್ತಿರುವ ವಿಡಿಯೋಗಳನ್ನು ಲಲಿತಾ ಝಾ ಚಿತ್ರೀಕರಿಸಿ ತಮ್ಮ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ವಿಕ್ಕಿ ಶರ್ಮಾ ಆರೋಪಿಗಳಿಗೆ ಆಶ್ರಯ ನೀಡಿದ್ದರು ಎನ್ನಲಾಗಿದೆ. ಆತ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದೆ.ದೆಹಲಿ ಪೊಲೀಸರ ಈವರೆಗಿನ ತನಿಖೆಯಲ್ಲಿ ಎಲ್ಲಾ ಆರೋಪಿಗಳು ಭಗತ್‌ಸಿಂಗ್ ಫ್ಯಾನ್ ಕ್ಲಬ್ ಎಂಬ ಸಾಮಾಜಿಕ ಮಾಧ್ಯಮ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.

6 ಮಂದಿ ಒಳನುಗ್ಗುವ ಪ್ರಯತ್ನ

ಎಲ್ಲಾ ಆರು ಮಂದಿ ಸಂಸತ್ತಿನ ಒಳಗೆ ಹೋಗಲು ಬಯಸಿದ್ದರು, ಆದರೆ ಸಾಗರ್ ಶರ್ಮಾ ಮತ್ತು ಮನೋರಂಜನ್ ಮಾತ್ರ ಪಾಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ಸಾಗರ್ ಶರ್ಮಾ ಸಂದರ್ಶಕರ ಗ್ಯಾಲರಿಯಿಂದ ಸದನಕ್ಕೆ ಜಿಗಿದ ಆಘಾತಕಾರಿ ದೃಶ್ಯಗಳಿಗೆ ಸಾಕ್ಷಿಯಾಯಿತು. ಅವರು ಹಳದಿ ಹೊಗೆ ಡಬ್ಬಿ ತೆಗೆದು ಸಿಡಿಸಿದ್ದರು ಇಬ್ಬರು ಆರೋಪಿಗಳು ಹಳದಿ ಬಣ್ಣದ ಅನಿಲಿ ಸಿಡಿಸುತ್ತಿದ್ದಂತೆ ಭದ್ರತಾ ಸಿಬ್ಬಂಧಿ ಇಬ್ಬರನ್ನು ವಶಕ್ಕೆ ಪಡೆದಿದ್ದರು.

ಸಂಸದರಿಗೆ ಭರವಸೆ: ಓಂ ಬಿರ್ಲಾ

ಲೋಕಸಭೆಯಲ್ಲಿ ಸಂಸದರಿಗೆ ಅವರ ಸುರಕ್ಷತೆಯ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಭರವಸೆ ನೀಡಿದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

2001 ರ ಸಂಸತ್ ದಾಳಿಯ ವಾರ್ಷಿಕೋತ್ಸವದಂದು ಭಾರೀ ಭದ್ರತಾ ಲೋಪ ಸಂಭವಿಸಿತ್ತು. ಆರೋಪಿಗಳ ವಿರುದ್ಧ ಐಪಿಸಿ ಆರೋಪಗಳಲ್ಲಿ ಕ್ರಿಮಿನಲ್ ಪಿತೂರಿ, ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಸೇವಕರು ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಬಲವನ್ನು ಬಳಸುವುದು ಸೇರಿ ವಿವಿಧ ಪ್ರಕರಣ ದಾಖಲು ಮಾಡಲಾಗಿದೆ.

ಏನಿದು ಯುಎಪಿಎ

ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯನ್ನು ಯುಎಪಿಎ ಎಂದು ಕರೆಯಲಾಗುತ್ತದೆ. ದೇಶದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ದೇಶದ್ರೋಹ, ಭಯೋತ್ಪಾದನೆ, ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ ಸಂಘಟನೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಯುಎಪಿಎ ಕಾಯ್ದೆಯಡಿ ಶಿಕ್ಷಗೆ    ಒಳಪಡಿಸಲಾಗುತ್ತದೆ. ದೇಶದ ಏಕತೆ ಮತ್ತು ಸಾರ್ವಭೌಮತ್ತೆ ಧಕ್ಕೆ ಉಂಟು ಮಾಡುವ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಲು ಈ ಕಾಯ್ದೆಯಡಿ ಅಧಿಕಾರವಿದೆ.

Related Articles

Back to top button
error: Content is protected !!