ಇತರೆ

ಲಂಡನ್‌ಗೆ ಹೋಗುವುದಾಗಿ ಹೇಳಿ ಹೋದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ!

Views: 143

ಕನ್ನಡ ಕರಾವಳಿ ಸುದ್ದಿ: ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ಪಡೆದಿದ್ದ ಹಣವನ್ನು ವಾಪಸ್ಸು ಕೇಳಿದ್ದಕ್ಕೆ ಹಣ ನೀಡಿದ್ದವನನ್ನೇ ಭೀಕರವಾಗಿ ಕೊಲೆ ಮಾಡಿ ಪರಾರಿಯಾದ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಂಪದೇನಹಳ್ಳಿ ಗ್ರಾಮದ ಬಾವಿಯೊಂದರಲ್ಲಿ 30 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿ ಕಾಲುಗಳಿಗೆ, ಬೆನ್ನಿಗೆ ಕಲ್ಲುಗಳನ್ನು ಹಾಗೂ ಬಾಯಿಗೆ ಹಗ್ಗವನ್ನು ಕಟ್ಟಿ ತಮ್ಮ ಜಮೀನಿನ ಬಾವಿಯೊಳಗೆ ಹಾಕಿದ್ದಾರೆಂದು ಕೆಂಪದೇನಹಳ್ಳಿಯ ವೀರಣ್ಣ ಇದೇ 18ರಂದು ನೀಡಿದ ದೂರಿನ ಮೇರೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೊಲೆಯಾದ ವ್ಯಕ್ತಿಯ ಬಟ್ಟೆ ಇತರೆಯನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ತಾಲ್ಲೂಕಿನ ರಾಂಪುರದ ವಿಶ್ವನಾಥ ಮತ್ತು ಭಾಗ್ಯ ಎಂಬುವವರು ಇದೇ 27 ರಂದು ಠಾಣೆಗೆ ಹಾಜರಾಗಿ ತಮ್ಮ ಕುಟುಂಬದ ರಾಮಾಂಜಿ ಇದೇ 18 ರಂದು ರಾತ್ರಿ ಲಂಡನ್‌ಗೆ ಹೋಗುವುದಾಗಿ ಹೇಳಿ ಸುಧಾಕರ್ ಎಂಬುವವರೊಂದಿಗೆ ಕಾರಿನಲ್ಲಿ ಹೋಗಿದ್ದು, ನಂತರ ಅವರಿಂದ ಯಾವುದೇ ರೀತಿಯ ಮಾಹಿತಿಯಾಗಲೀ, ಮೊಬೈಲ್‌ ಕರೆಯಾಗಲೀ ಬಾರದ ಹಿನ್ನಲೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿಯಿಂದ ಆತಂಕಗೊಂಡು ದೂರು ನೀಡಲು ಠಾಣೆಗೆ ಬಂದಾಗ ಅವರಿಗೆ ಕೆಂಪದೇನಹಳ್ಳಿಯ ಬಾವಿಯಲ್ಲಿ ದೊರೆತ ಶವದ ಪೋಟೋ, ಬಟ್ಟೆ ಇತ್ಯಾದಿಗಳನ್ನು ತೋರಿಸಿದಾಗ ಅದು ತಮ್ಮ ಸಹೋದರ ರಾಮಾಂಜಿಯದೇ ಎಂದು ಕೊಲೆಯಾದ ವ್ಯಕ್ತಿ ನಮ್ಮ ತಮ್ಮ ರಾಮಾಂಜಿ ಎಂದು ಅಣ್ಣ ವಿಶ್ವನಾಥ ಮತ್ತು ಅಕ್ಕ ಭಾಗ್ಯ ಎಂದು ಗುರುತಿಸಿರುತ್ತಾರೆಂದು ಎಸ್ಪಿ ಕುಶಾಲ್‌ ಚೌಕ್ಸೆ ವಿವರಿಸಿದರು.

ಮೃತ ರಾಮಾಂಜಿಯ ಸಂಬಂಧಿಕರನ್ನು, ಸ್ಥಳೀಯರನ್ನು ವಿಚಾರಣೆ ಮಾಡಿದ ನಂತರ ಈ ಭಾಗದಲ್ಲಿರುವ ಎಲ್ಲಾ ಸಿಸಿ ಕ್ಯಾಮೆರಾಗಳ ಪುಟೇಜ್‌ಗಳನ್ನು ಸಂಗ್ರಹಿಸಿ, ತಾಂತ್ರಿಕ ಮತ್ತು ವೈಜ್ಞಾನಿಕ ತನಿಖಾ ಪದ್ಧತಿಗಳನ್ನು ಬಳಿಸಿ ಕೃತ್ಯ ಮಾಡಿರುವ ಆರೋಪಿಗಳಾದ ದೊಡ್ಡಗುಟ್ಟಹಳ್ಳಿಯ ಖಾಸಗಿ ಪೈನಾನ್ಸ್‌ನಲ್ಲಿ ಕೆಲಸ ನಿರ್ವಹಿಸುವ ಸುಧಾಕರ್ ಬಿನ್ ರಾಮಕೃಷ್ಣಪ್ಪ (26), ತಳಗವಾರದ ವಾಸಿ ಟಮೋಟೋ ಮಾರ್ಕೆಟ್‌ನಲ್ಲಿ ಕೆಲಸ ಮಾಡುವ ಮಂಜುನಾಥ ಬಿನ್ ರಾಚಪ್ಪ (27) ಮತ್ತು ಸುಧಾಕರ್‌ನ ಸಹೋದರ ಎಂ. ಮನೋಜ್ ಬಿನ್ ರಾಮಕೃಷ್ಣಪ್ಪ (23) ಎಂಬುವವರನ್ನು ದಸ್ತಗಿರಿ ಮಾಡಿ, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅವರಿಂದ ಕೊಲೆಯ ರಹಸ್ಯವನ್ನು ಪತ್ತೆ ಮಾಡಲಾಯಿತೆಂದು, ರಾಮಾಂಜಿ ತಾನು ನೀಡಿದ್ದ ಹಣವನ್ನು ವಾಪಾಸ್ಸು ಕೇಳಿದ್ದೇ ಆತನ ಕೊಲೆಗೆ ಪ್ರಮುಖ ಕಾರಣವಾಗಿದೆ ಎಂದರು.

ಬಿಎಸ್ಸಿ ಅಗ್ರಿಕಲ್ಚರ್‌ ವ್ಯಾಸಂಗ ಮಾಡಿರುವ ರಾಮಾಂಜಿ ಬೆಂಗಳೂರಿನ ಯಲಹಂಕದ ನಿವೇದ ಇನ್ಸಿಟ್ಯೂಟ್‌ನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, ಒಂದು ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಗೆ ವಾಪಸ್ಸು ಬಂದಿದ್ದು ಸ್ನೇಹಿತ ಸುಧಾಕರ್ ನೆರವಿನಿಂದ ನನಗೆ ಲಂಡನ್‌ನಲ್ಲಿ ಕೆಲಸ ಸಿಗಲಿದ್ದು, ಅಲ್ಲಿಗೆ ಹೋಗುತ್ತೇನೆಂದು ಮನೆಯಲ್ಲಿ ತಿಳಿಸಿದ್ದು, ಅದರಂತೆ ಇದೇ 18ರಂದು ರಾತ್ರಿ ಸುಧಾಕರ್‌ರೊಂದಿಗೆ ಲಗೇಜ್‌ ತೆಗೆದುಕೊಂಡು ಕಾರಿನಲ್ಲಿ ಹೋಗಿರುತ್ತಾನೆಂದು ಸಂಬಂದಿಕರು ತಿಳಿಸಿದ್ದರು.

ಮೃತ ರಾಮಾಂಜಿ ಮತ್ತು ಕೊಲೆ ಆರೋಪಿ ಸುಧಾಕರ್‌ ಅಯ್ಯಪ್ಪಸ್ವಾಮಿ ಮಾಲೆ ಹಾಕುವ ಸಮಯದಲ್ಲಿ ಸ್ನೇಹಿತರಾಗಿದ್ದು, ತಾನು ಇಂತಹ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದು, ನನ್ನ ಬಳಿ ಹಣ ಇದೆ ನನಗೆ ಕೆಲಸ ಕೊಡಿಸುವ ಬಗ್ಗೆ ದೊಡ್ಡಮಟ್ಟದಲ್ಲಿ ಸಂಪರ್ಕ ಇದೆಯೆಂದು ರಾಮಾಂಜಿಯನ್ನು ನಂಬಿಸಿ ಆತನಿಂದ ಲಕ್ಷಾಂತರ ರೂ.ಗಳನ್ನು ಪಡೆದಿದ್ದು ಕೆಲಸ ಕೊಡಿಸದೇ ಸಬೂಬು ಹೇಳಿಕೊಂಡು ಕಾಲ ನೂಕುತ್ತಿದ್ದರಿಂದ ಅನುಮಾನಗೊಂಡ ರಾಮಾಂಜಿ ತನ್ನ ಹಣವನ್ನು ವಾಪಸ್‌ ನೀಡುವಂತೆ ಸುಧಾಕರ್‌ನನ್ನು ಒತ್ತಾಯಿಸಿದ್ದಾರೆ.

ಹಣವನ್ನು ವಾಪಸ್ಸು ಕೇಳಿದ್ದರಿಂದ ಕುಪಿತನಾದ ಸುಧಾಕರ್ ರಾಮಾಂಜಿಯನ್ನು ಕೊಲೆ ಮಾಡಲು ಮೊದಲೇ ಸಂಚು ರೂಪಿಸಿ ಕೆಂಪದೇನಹಳ್ಳಿ ಬಳಿ ಬಾವಿ ಇರುವುದನ್ನು ಖಚಿತಪಡಿಸಿಕೊಂಡು, ನಿನಗೆ ಪಾಸ್‌ರ್ಪೋರ್ಟ್‌ ಸಿಕ್ಕಿದ್ದು, ವೀಸಾ ಕೂಡಾ ಅಪ್ರೂವ್‌ ಆಗಿದೆ, ವಿಮಾನದ ಟಿಕೆಟ್‌ ಸಹ ಇದೆಯೆಂದು ಇದೇ 19ರಂದು ರಾತ್ರಿ ರಾಂಪುರ ಗ್ರಾಮದಿಂದ ರಾಮಾಂಜಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಬೆಂಗಳೂರಿನ ಲಾಡ್ಜ್‌ನಲ್ಲಿ ರೂಮ್‌ ಬುಕ್‌ ಮಾಡಿ ರಾಮಾಂಜಿಗೆ ಬಲವಂತವಾಗಿ ಮದ್ಯ ಕುಡಿಸಿ ನಂತರ ಆತನನ್ನು ಕಾರಿನಲ್ಲಿಯೇ ಉಸಿರುಗಟ್ಟಿಸಿ ಸಾಯಿಸಿ, ಕಾಲು, ಬೆನ್ನಿಗೆ ಕಲ್ಲುಗಳನ್ನು ಹಗ್ಗದಿಂದ ಕಟ್ಟಿ ಹಾಗೂ ಬಾಯಿಗೆ ಹಗ್ಗವನ್ನು ಕಟ್ಟಿ ಕೆಂಪದೇನಹಳ್ಳಿಯ ಬಾವಿಗೆ ಹಾಕಿ, ತಳಗವಾರ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಖರೀದಿಸಿ ರಾಮಾಂಜಿಯ ಪಾಸ್‌ಪೋರ್ಟ್‌ ಹಾಗೂ ಆತನಿಗೆ ಸಂಬಂಧಿಸಿದ ದಾಖಲೆಗಳನ್ನು ಸುಟ್ಟುಹಾಕಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ ಹಾಗೂ ಆರೋಪಿ ಸುಧಾಕರ್ ವಿರುದ್ಧ ಒಂದು ಮಿಸ್ಸಿಂಗ್‌ ಪ್ರಕರಣ, ಒಂದು ಗ್ಯಾಂಬ್ಲಿಂಗ್‌ ಪ್ರಕರಣ ದಾಖಲಾಗಿದೆಯೆಂದು ಚೌಕ್ಸೆ ವಿವರಿಸಿದರು.

Related Articles

Back to top button