ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕಿಂಗ್ ಪಿನ್ ನಟಿ ಪವಿತ್ರಾಗೌಡ ತನಿಖೆಯಲ್ಲಿ ದೃಢ

Views: 193
ಬೆಂಗಳೂರು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಕಿಂಗ್ ಪಿನ್ ನಟಿ ಪವಿತ್ರಾಗೌಡ ಎನ್ನುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಪ್ರಕರಣದ ಮೊದಲ ಆರೋಪಿಯಾಗಿರುವ ಪವಿತ್ರಾಗೌಡಗೆ ನ್ಯಾಯಾಂಗ ಬಂಧನದಲ್ಲಿದ್ದು ಜೈಲಿಗೆ ಸೇರಿರುವ ಬೆನ್ನಲ್ಲೇ ಆಕೆಯೇ ಕೃತ್ಯಕ್ಕೆ ಪ್ರಮುಖ ಕಾರಣ ಎಂಬುದನ್ನು ಪೊಲೀಸರು ಹೊಸ ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಎ1, ಎ2ರಿಂದ ಎ7 ಎ11, ಎ12, ಎ13, ಹಾಗೂ ಎ16, ಆರೋಪಿಗಳು ಕೊಲೆಯಂತ ಒಂದು ಗಂಭೀರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿ ಕೃತ್ಯ ಎಸಗಿದ್ದು, ಇವರಿಗೆ ಕಾನೂನಿನ ಮೇಲೆ ಕಿಂಚಿತ್ ಗೌರವ ಇಲ್ಲದೇ ಇರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ.
ಎ1 ಆರೋಪಿಯೇ ಕೃತ್ಯಕ್ಕೆ ಪ್ರಮುಖ ಕಾರಣ ಕರ್ತೆಯಾಗಿದ್ದು ಈಕೆಯು ಪ್ರಚೋದನೆ ನೀಡಿ ಇತರೆ ಆರೋಪಿಗಳೊಂದಿಗೆ ಸೇರಿ ಕೊಲೆಗೆ ಒಳಚಂಚು ರೂಪಿಸಿರುವುದು ಮತ್ತು ಕೃತ್ಯದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ.
ಎ2 ಆರೋಪಿಯು ತನ್ನ ಹಣ ಹಾಗೂ ಇತರೆ ಆರೋಪಿಗಳನ್ನು ಒಳಗೊಂಡ ತನ್ನ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿ ಹಾಗೂ ಭಾಗಿಯಾಗಿಸಿ ನೆಲದ ಕಾನೂನನ್ನು ದುರುಪಯೊಗ ಪಡಿಸಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ಕಂಡು ಬಂದಿರುತ್ತದೆ.
ಎ2 ಆರೋಪಿಯು ತನ್ನ ಹಣಬಲ ಮತ್ತು ಪ್ರಭಾವಿ ಅಭಿಮಾನಿ ಬಳಗವನ್ನು ಬಳಿಸಿಕೊಂಡು ಅಮಾಯಕ ಮೃತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ಎ4 ಮತ್ತು ಎ6 ರಿಂದ ಎ8ರ ವರೆಗಿನ ಆರೋಪಿಗಳಿಂದ ಆತನನ್ನು ಅಪಹರಣ ಮಾಡಿಸಿದ್ದಾರೆ.
ಮೃತನ ಬಳಿಯಿಂದ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಪಟ್ಟಣಗೆರೆಯ ಎ10ಆರೋಪಿ ವಿನಯ್ ಸಂಬಂಧಿಯಾದ ಜಯಣ್ಣ ಅವರಿಗೆ ಸೇರಿದ್ದ ಶೆಡ್‌ಗೆ ಕರೆತಂದು ಅಲ್ಲಿ ಎ1 ಆರೋಪಿಯು ಸೇರಿದಂತೆ ಇತರೆ ಆರೋಪಿಗಳೊಂದಿಗೆ ಸಮಾನ ಉದ್ದೇಶದಿಂದ ಎಲ್ಲರೂ ಸೇರಿ ಮೃತನ ಮೇಲೆ ಅಮಾನುಷವಾಗಿ ಮತ್ತು ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದೆಲ್ಲವೂ ಈವರೆಗಿನ ತನಿಖೆಯಲ್ಲಿ ಸಂಗ್ರಹಿಸಿರುವ ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುತ್ತದೆ.
ಆರೋಪಿಗಳು ಕೃತ್ಯದ ನಂತರ ಮತ್ತೆ ಒಳಸಂಚು ರೂಪಿಸಿ ಸಾಕ್ಷ್ಯ ನಾಶ ಪಡಿಸುವ ಉದ್ದೇಶದಿಂದ ಶವವನ್ನು ಸಾಗಿಸಲು ತಮ್ಮ ಹಣದ ಪ್ರಭಾವ ಬಳಸಿ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಹಣದ ಆಮಿಷ ತೋರಿಸಿ ಅವರ ಮೂಲಕ ಶವವನ್ನು ಕೃತ್ಯ ನಡೆದ ಸ್ಥಳದಿಂದ ಬೇರೆ ಕಡೆ ಸಾಗಿಸಿ ಸಾಕ್ಷಿ ನಾಶ ಪಡಿಸಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.
ಕೈದಿ ನಂ 6024 ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾಗೆ ಡಿ ಬ್ಯಾರಕ್ ಸಿಕ್ಕಿದ್ದು,ಕೈದಿ ನಂಬರ್ 6024 ಸಂಖ್ಯೆಯನ್ನು ನೀಡಲಾಗಿದೆ.
ಪ್ರಕರಣದ ಉಳಿದ ಆರೋಪಿಗಳು ಜೈಲಿನ ಕ್ವಾರೆಂಟೈನ್ ಬ್ಯಾರಕ್‌ನಲ್ಲಿ ಇಡಲಾಗಿದ್ದು, ಎಲ್ಲಾ ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿಗೆ ಬಂದ ಪವಿತ್ರಾ ಗೌಡ ಮಗಳು ಮತ್ತು ತಾಯಿ ಸೇರಿದಂತೆ ಕುಟುಂಬದವರು ಆಕೆಯನ್ನು ಭೇಟಿಯಾಗಿದ್ದಾರೆ.
ನಿನ್ನೆ ಕೋರ್ಟ್‌ನಲ್ಲಿ ವಿಚಾರಣೆ ಮುಗಿಸಿ ಪವಿತ್ರಾ ಪೊಲೀಸ್ ವ್ಯಾನ್ ಹತ್ತಿದಾಗ ಅವರನ್ನು ನೋಡಲು ಪುತ್ರಿ ಖುಷಿ ಗೌಡ ಆಗಮಿಸಿದ್ದು, ನೂಕುನುಗ್ಗಲಿನ ನಡುವೆ ತಾಯಿ ಜೊತೆ ಮಾತನಾಡಲು ಅಕೆ ಹರಸಾಹಸ ಪಡಬೇಕಾಯಿತು. ಪವಿತ್ರಾ ಗೌಡ ಅವರ ಕುಟುಂಬದ ಇತರೆ ಸದಸ್ಯರು ಕೂಡ ಪೊಲೀಸ್ ವ್ಯಾನ್‌ನ ಪಕ್ಕದಲ್ಲಿ ನಿಂತು ಮಾತನಾಡಿದ್ದರು.






