ಇತರೆ

ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಪ್ರಕರಣ:ಮುತ್ತಪ್ಪ ರೈ 2ನೇ ಪತ್ನಿ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್‌

Views: 125

ಕನ್ನಡ ಕರಾವಳಿ ಸುದ್ದಿ: ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬಿಡದಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಾಗಿದೆ.

ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತವಾಗಿದ್ದ ರಾಕೇಶ್ ಮಲ್ಲಿ, ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವೇಳೆ ಬಸವರಾಜ್ ಕಾರು ಚಾಲನೆ ಮಾಡುತ್ತಿದ್ದರು. ಹೀಗಾಗಿ ಫೈರಿಂಗ್ ಆಗುತ್ತಿದ್ದಂತೆ ಅವರು ಮುಂದೆ ಬಾಗಿದ್ದಾರೆ. ಇದೀಗ ಬಸವರಾಜ್ ದೂರು ಆಧರಿಸಿ ಎ1 ರಾಕೇಶ್ ಮಲ್ಲಿ, ಎ2 ಅನುರಾಧಾ, ಎ3 ನಿತೇಶ್ ಶೆಟ್ಟಿ ಹಾಗೂ ಎ4 ವೈದ್ಯನಾಥನ್ ವಿರುದ್ಧ ಕೇಸ್ ದಾಖಲಾಗಿದೆ.

ರಿಯಲ್ ಎಸ್ಟೇಟ್ ವಿಚಾರವಾಗಿ ಈ ಹಿಂದೆಯೂ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣದ ತನಿಖೆಗೆ ಐದು ತಂಡಗಳನ್ನು ರಚಿಸಲಾಗಿದ್ದು, ರೈ ಮಾಜಿ ಪತ್ನಿ ಮತ್ತು ರೈ ಬಲಗೈ ಬಂಟನಾಗಿದ್ದ ಮಿಥುನ್‌ ರೈ ಮೇಲೆ ಪೊಲೀಸರ ಅನುಮಾನದ ರೇಡಾರ್‌ ಹರಿದಿದೆ. ಮುತ್ತಪ್ಪ ರೈ ಅವರ 2000 ಕೋಟಿ ರೂಪಾಯಿಯ ಆಸ್ತಿಪಾಸ್ತಿಗೆ ಸಂಬಂಧಿಸಿದ ತಗಾದೆಯೇ ಈ ಗುಂಡಿನ ದಾಳಿಗೆ ಕಾರಣವಾಗಿರುವ ಶಂಕೆ ಇದೆ.

ಪೊಲೀಸರು ಈ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ಮಾಡಲು ಮುಂದಾಗಿದ್ದಾರೆ. ಮುತ್ತಪ್ಪ ರೈ ಅವರ ಭೂಗತ ಲೋಕದ ಹಿನ್ನೆಲೆಯಿಂದ ರಿಕ್ಕಿ ರೈ ಟಾರ್ಗೆಟ್ ಆಗಿರಬಹುದು. ರಿಕ್ಕಿ ರೈಯ ಬ್ಯುಸಿನೆಸ್ ವಿಷಯಕ್ಕೆ ಸಂಬಂಧಿಸಿದಂತೆ ಅಥವಾ ಹಳೆಯ ವೈರತ್ವದಿಂದ ರಿಕ್ಕಿ ರೈ ವಿರುದ್ಧ ದಾಳಿ ನಡೆಸಿರಬಹುದು. ಹಣಕಾಸಿನ ಗಲಾಟೆಯಿಂದ, ವೈಯಕ್ತಿಕ ದ್ವೇಷದಿಂದ, ಅಥವಾ ರಿಯಲ್ ಎಸ್ಟೇಟ್ ವಿವಾದದಿಂದಲೂ ಆಗಿರಬಹುದು. ಈ ಎಲ್ಲ ಕೋನಗಳಿಂದಲೂ ಪೊಲೀಸರು ತನಿಖೆಗೆ ಇಳಿದಿದ್ದಾರೆ.

Related Articles

Back to top button