ರಾತ್ರಿ ಮಲಗಿರುವಾಗ ನಾಗರ ಹಾವು ಕಡಿದು 10ನೇ ತರಗತಿ ಬಾಲಕಿ ಸಾವು

Views: 109
ಕನ್ನಡ ಕರಾವಳಿ ಸುದ್ದಿ: ರಾತ್ರಿ ಮಲಗಿದ್ದಾಗ ನಾಗರ ಹಾವು ಕಡಿದು15 ವರ್ಷದ ಬಾಲಕಿ ಮೃತಪಟ್ಟ ಘಟನೆ ಬಳ್ಳಾರಿ ತಾಲೂಕಿನ ಹೊಸ ಮೋಕಾ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
15 ವರ್ಷದ ಬಾಲಕಿ ಶ್ರಾವಣಿ ಹಾವು ಕಡಿತದಿಂದ ಮೃತಪಟ್ಟವಳು. ಬಾಲಕಿಯು ಹೊಸ ಮೋಕಾ ಗ್ರಾಮದ ಲಕ್ಷ್ಮಣ ಹಾಗೂ ಶೇಕಮ್ಮ ದಂಪತಿಯ ಮಗಳಾಗಿದ್ದಳು. ಶ್ರಾವಣಿ ಮೋಕಾ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ರಾತ್ರಿ ಮಲಗಿರುವಾಗ ಬಾಲಕಿಗೆ ಮೂರು ಸಲ ನಾಗರ ಹಾವು ಕಚ್ಚಿದೆ. ಕೈ ಮತ್ತು ಕಾಲಿಗೆ ನಾಗರ ಹಾವು ಕಡಿದರೂ ಬಾಲಕಿಗೆ ಎಚ್ಚರವಾಗಿರಲಿಲ್ಲ. ಬಳಿಕ ನಿದ್ರೆಯಲ್ಲಿಯೇ ವಿಷವೇರಿ ಬಾಲಕಿ ಮೃತಪಟ್ಟಿದ್ದಾಳೆ. ಬೆಳಗ್ಗೆ ಪೋಷಕರು ಎದ್ದು, ಮಗಳನ್ನು ಎಬ್ಬಿಸಲು ಮುಂದಾದಾಗ ಆಕೆ ಸಾವನ್ನಪ್ಪಿರುವುದು ಗೊತ್ತಾಗಿದೆ.
ಈ ವೇಳೆ, ಪೋಷಕರು ಹುಡುಕಾಡಿದಾಗ ನಾಗರ ಹಾವು ಕೂಡ ಮನೆಯಲ್ಲಿ ಇರುವುದು ಕಂಡುಬಂದಿದೆ.ತೀವ್ರ ಬಡತನ ಹಿನ್ನೆಲೆಯಲ್ಲಿ ಹಳೆ ಮನೆಯಲ್ಲಿಯೇ ದಂಪತಿ ವಾಸವಿದ್ದರು.ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೋಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.