ಯಾವುದೇ ಷರತ್ತಿಗೆ ಹುಡುಗರು ಒಪ್ಪುತ್ತಿಲ್ಲ.. ಮದುವೆ ವಿಳಂಬ ಕಾರಣಕ್ಕೆ ಇಂಜಿನಿಯರ್ ಯುವತಿ ಆತ್ಮಹತ್ಯೆ
Views: 254
ಕನ್ನಡ ಕರಾವಳಿ ಸುದ್ದಿ,:ಮದುವೆಯಾಗುವ ಹುಡುಗರು ತನ್ನ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ ಒಬ್ಬರು ಹುಸೇನ್ ಸಾಗರ್ಗೆ ಹಾರಿ ಜೀವಬಿಟ್ಟ ದಾರುಣ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಮೃತ ಯುವತಿಯನ್ನು ನಿಜಾಮಾಬಾದ್ ಜಿಲ್ಲೆಯ ಬೈನ್ಸಾ ಮೂಲದ ವಿಜಯಲಕ್ಷ್ಮಿ (26) ಎಂದು ಗುರುತಿಸಲಾಗಿದೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಈಕೆ, ಹೈದರಾಬಾದ್ನ ಕೂಕಟ್ಪಲ್ಲಿಯ ಮೈತ್ರಿ ನಗರದಲ್ಲಿ ತನ್ನ ತಾಯಿ ಸರಸ್ವತಿ ಅವರೊಂದಿಗೆ ವಾಸವಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ವಿಜಯಲಕ್ಷ್ಮಿಗೆ ಅವರ ತಾಯಿಯೇ ಸರ್ವಸ್ವವಾಗಿದ್ದರು.
ವಿಜಯಲಕ್ಷ್ಮಿ ಅವರ ಕುಟುಂಬಸ್ಥರು ಕಳೆದ ಕೆಲವು ಸಮಯದಿಂದ ಆಕೆಗೆ ಮದುವೆ ಮಾಡಲು ವರನ ಹುಡುಕಾಟ ನಡೆಸುತ್ತಿದ್ದರು. ಹಲವು ಸಂಬಂಧಗಳು ಬಂದಿದ್ದವು, ಬಂದವರೆಲ್ಲರಿಗೂ ವಿಜಯಲಕ್ಷ್ಮಿ ಇಷ್ಟವಾಗುತ್ತಿದ್ದರು. ವಿಜಯಲಕ್ಷ್ಮಿ ಅವರದ್ದೊಂದು ಮುಖ್ಯ ಷರತ್ತು ಇರುತ್ತಿತ್ತು. ಅವರ ತಾಯಿ ಸರಸ್ವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಒಬ್ಬಂಟಿಯಾಗಿದ್ದಾರೆ. ಹೀಗಾಗಿ ಮದುವೆಯ ನಂತರವೂ ತಾಯಿಯನ್ನು ತನ್ನೊಂದಿಗೇ ಇಟ್ಟುಕೊಂಡು ಸಾಕೋ ಜವಾಬ್ದಾರಿಯನ್ನು ಹೊರುವುದಾಗಿ ವಿಜಯಲಕ್ಷ್ಮಿ ಹೇಳುತ್ತಿದ್ದರು.
ಆದರೆ, ವಿಜಯಲಕ್ಷ್ಮಿ ನೋಡಲು ಬರುತ್ತಿದ್ದ ಯಾವುದೇ ಯುವಕ ಅಥವಾ ಅವರ ಪೋಷಕರು ಈ ಷರತ್ತಿಗೆ ಒಪ್ಪುತ್ತಿರಲಿಲ್ಲ. ಮದುವೆಯ ನಂತರ ತಾಯಿಯನ್ನು ಜೊತೆಗೆ ಕರೆದುಕೊಂಡು ಬರಬಾರದು ಎಂದು ಹೇಳುತ್ತಿದ್ದರು. ಇದರಿಂದಾಗಿ ಬಂದ ಸಂಬಂಧಗಳೆಲ್ಲವೂ ಮುರಿದು ಬೀಳುತ್ತಿದ್ದವು. ಮದುವೆ ವಿಳಂಬವಾಗುತ್ತಿರುವುದು ಹಾಗೂ ತಾಯಿಯ ಅನಾರೋಗ್ಯದ ಚಿಂತೆಯಿಂದ ವಿಜಯಲಕ್ಷ್ಮಿ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಗಲಾಟೆಯೂ ನಡೆಯುತ್ತಿತ್ತು ಎನ್ನಲಾಗಿದೆ.
ಘಟನೆಯ ಹಿನ್ನೆಲೆ
ಜನವರಿ 31ರಂದು ಬೆಳಿಗ್ಗೆ ವಿಜಯಲಕ್ಷ್ಮಿ ಅವರು ತಾಯಿಗೆ “ಎರಡು ದಿನಗಳಲ್ಲಿ ವಾಪಸ್ ಬರುತ್ತೇನೆ” ಎಂದು ಹೇಳಿ ರ್ಯಾಪಿಡೋ ಬೈಕ್ ಬುಕ್ ಮಾಡಿ ಮನೆಯಿಂದ ಹೊರಬಂದಿದ್ದರು. ಆದರೆ ಅವರು ಹೇಳಿದಂತೆ ಮನೆಗೆ ಮರಳದಿದ್ದಾಗ ಗಾಬರಿಗೊಂಡ ತಾಯಿ ಸರಸ್ವತಿ ಭಾನುವಾರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಹುಸೇನ್ ಸಾಗರ್ ಕೆರೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದ ಪೊಲೀಸರು ಗಾಂಧಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.






