ಯಕ್ಷ ಕವಿ, ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ
Views: 186
ಕನ್ನಡ ಕರಾವಳಿ ಸುದ್ದಿ: ಯಕ್ಷ ಕವಿ, ಯಕ್ಷಗಾನ ರಂಗದ ಶ್ರೇಷ್ಠ ಸಾಧಕ ,ಪ್ರಸಂಗಕರ್ತ, ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಅವರು ಬುಧವಾರ ಬೆಳಿಗ್ಗೆ(ನ26) ನಿಧನ ಹೊಂದಿದ್ದಾರೆ. ಅವರಿಗೆ 89 ವರ್ಷ ಪ್ರಾಯವಾಗಿತ್ತು.
ಯಕ್ಷ ಕವಿ ಕಂದಾವರ ರಘುರಾಮಶೆಟ್ಟಿ ಅವರು ಬಹುಮುಖ ಪ್ರತಿಭೆಯ ಶ್ರೇಷ್ಠ ಪ್ರಸಂಗ ಕರ್ತರು, ನೂರು ನಾಟಕಗಳಲ್ಲಿ ಹಾಸ್ಯ ನಟನಾಗಿ, ಭಾಗವತರಾಗಿ ,ಅರ್ಥಧಾರಿಯಾಗಿ, ವೇಷದಾರಿಯಾಗಿ, ಪ್ರಸಂಗಕರ್ತರಾಗಿ, ನಾಟಕ, ಶಿಶು ಗೀತೆ ಅಭಿನಯ ಗೀತೆ , ಕವನಗಳನ್ನು ರಚಿಸಿದ ಅವರು ಯಕ್ಷಗಾನ ವಲಯದಲ್ಲಿ ಕಂದಾವರದವರು ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾಗಿ ಪುರಾಣ ಪ್ರವಚನದಲ್ಲಿ ವಾಚಕರಾಗಿ, ಪ್ರವಚಕರಾಗಿದ್ದರು. ಆರರಿಂದ ಏಳು ಪ್ರಶಸ್ತಿಗಳನ್ನು ಪಡೆದಿರುತ್ತಾರೆ
ಕಂದಾವರ ರಘುರಾಮ ಶೆಟ್ಟಿಯವರು ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನ ಬಳ್ಳೂರು ಗ್ರಾಮದ ಕಂದಾವರದಲ್ಲಿ 1936 ರಲ್ಲಿ ಕರ್ಕಿ ಸದಿಯಣ್ಣ ಶೆಟ್ಟಿ. ತಾಯಿ ಕಂದಾವರ ಪುಟ್ಟಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದರು.
ತಮ್ಮ ಪತ್ನಿ, ಮಕ್ಕಳು ಮೊಮ್ಮಕ್ಕಳ ಜತೆ ನೂಜಾಡಿ ಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ತಮ್ಮ ಆರಂಭದ ಬದುಕಿನಲ್ಲಿ ‘ಕಂಡೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯರಾಗಿ, ಸುಮಾರು 35 ವರ್ಷಗಳ ಕಾಲ ಸೇವೆ ಮಾಡಿದ್ದ ಕಂದಾವರ ರಘುರಾಮ ಶೆಟ್ಟಿಯವರು, ‘ಮಾದರಿ ಶಿಕ್ಷಕ’ ಪ್ರಶಸ್ತಿಗೆ ಭಾಜನರಾಗಿದ್ದರು.
ಪ್ರಸಂಗಕರ್ತರಾಗಿ ಕಂದಾವರ ರಘುರಾಮ ಶೆಟ್ಟಿಯವರು ‘ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದರು. ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀ ದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿಯಂತಹ ಸೂಪರ್ ಹಿಟ್ ಪ್ರಸಂಗಗಳನ್ನು ಕೊಡುಗೆಯಾಗಿ ನೀಡಿದ್ದರು.






