ಸಾಂಸ್ಕೃತಿಕ
ಮೊದಲ ಪ್ರೇಮ

Views: 232
ಮೊದಲ ನೋಟಕೆ ಸೋತೆ ಹೃದಯದೊಳು ನೀ ಕೂತೆ
ಮಧುರ ಸಂಗಮವಿದುವು ಹೌದಲ್ಲವೇ |ಪ
ಮದರಂಗಿ ಹೊಳೆದಾಗ ಮದುಮಗಳ ಕರದಲ್ಲಿ
ಉದಯಿಸುವ ಬಾಂಧವ್ಯ ಸೊಗಸಲ್ಲವೇ
ಅರುಹದೇ ಪರಿಚಯವ ವರಿಸುವಾತುರವೇಕೆ
ಹರಿಸಿದೊಡೆ ನವ ರಾಗ ನಾನೊಪ್ಪಲೇ |
ಬರುತಲಿದೆ ಯಾಕರಿಯೆ ತೆರೆಯಂತೆ ಮುನ್ನುಗ್ಗಿ
ತರಹ ಕಂಪನವೇಕೊ ನಾ ತಳ್ಳಲೇ ||
ನಾಚಿಕೆಯ ನೋಟದೊಳು ದೋಚಿರುವೆ ನನ್ನೊಲವ
ಗೀಚಿರುವ ಸಾಲುಗಳ ನಾ ಹಾಡಲೇ |
ಸೂಚನೆಯು ಸಿಕ್ಕೊಡನೆ ಯೋಚನೆಯು ನನಗಿಲ್ಲ
ಚಾಚಿರುವ ತೋಳಿನಲಿ ಹೂವನಿಡಲೇ
ಸುಮ್ಮನಿರು ಕೆಣಕದಿರು ಚಿಮ್ಮುತಿದೆ ಹೊಸ ಬಯಕೆ
ಸಮ್ಮತಿಯ ಕೊಟ್ಟಾಯ್ತು ನಾನಾಗಲೇ |
ನಮ್ಮೆದೆಯ ಭಾವಗಳ ಸಮ್ಮಿಲನದಾಟದಲಿ
ನೆಮ್ಮದಿಯು ಮೇಳೈಸೆ ಕುಣಿದಾಡಲೇ ||
ರಂಗೇರಿದಾ ಮೊಗದ ಕಂಗಳೊಳು ಸುಳಿದಿರುವ
ಹೊಂಗನಸ ಪದಪುಂಜ ನಾನರುಹಲೇ |
ಸಿಂಗರಿಸ ಬೇಕಿಲ್ಲ ಹೊಂಗಿರಣ ನೀನಿರಲು
ಮಂಗಳೆಗೆ ಸಿಂಧೂರ ನಾ ಹಚ್ಚಲೇ ||
ಬೇಡಿಕೆಯ ಇಟ್ಟೊಡನೆ ಹಾಡಲಾರೆನು ಇನಿಯ
ನೋಡಿಹರು ನಮ್ಮಪ್ಪ ನಾ ಕರೆಯಲೇ |
ಕೂಡಿ ಬಾಳಲು ಹೊರಟ ಜೋಡಿ ಹಕ್ಕಿಗಳೆರಡು
ಮೋಡಿ ಮಾಡುವ ಹೊತ್ತು ಬಂತಾಗಲೇ
-ಶೋಭಾ ಹರಿಪ್ರಸಾದ ಶೆಟ್ಟಿಗಾರ್ ಉಡುಪಿ






