ರಾಜಕೀಯ

ಮೇಲ್ಮನೆ ಚುನಾವಣೆಗೆ ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರು..?

Views: 14

ಕನ್ನಡ ಕರಾವಳಿ ಸುದ್ದಿ: ವಿಧಾನಪರಿಷತ್‌ ಚುನಾವಣೆ ಖಚಿತವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗಿದ್ದು, ಮೂರು ಪಕ್ಷಗಳು ತಮ್ಮ ಶಾಸಕರನ್ನು ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಾಂಗ್ರೆಸ್ ನಾಲ್ಕು ಅಭ್ಯರ್ಥಿ, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುವುದು ಖಚಿತವಾಗಿದೆ. ಆದರೆ ರಾಜ್ಯಸಭೆಗೆ ಏಳನೇ ಅಭ್ಯರ್ಥಿಯಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವ ಕುತೂಹಲವಿದೆ. ಕಾಂಗ್ರೆಸ್‌ಗೆ ತನ್ನ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಹಲವು ಮಾರ್ಗಗಳಿದ್ದರೂ ಸವಾಲು ತೆಗೆದುಕೊಳ್ಳದಿರಲು ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ. ಆಡಳಿತಾರೂಢ ಕಾಂಗ್ರೆಸ್‌ನ ಈ ನಡೆಯ ಬೆನ್ನಲ್ಲೇ ಬಿಜೆಪಿ-ಜೆಡಿಎಸ್ ಸಹ ಇದೇ ಮಾರ್ಗ ಅನುಸರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮೇಲ್ನೋಟಕ್ಕೆ ಪಕ್ಷೇತರ ಹಾಗೂ ಉಚ್ಚಾಟಿತ ಶಾಸಕರ ನೆರವಿನಿಂದ ಕಾಂಗ್ರೆಸ್ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬಹುದು ಎನ್ನಲಾಗತ್ತಿದೆ. ಆದರೆ ಮತಗಳು ಅಸಿಂಧುಗೊಂಡರೆ, ಅನಿವಾರ್ಯ ಕಾರಣಗಳಿಗೆ ಶಾಸಕರು ಗೈರಾದರೆ ಈ ಲೆಕ್ಕಾಚಾರ ಉಲ್ಟಾ ಆಗಲಿದೆ. ಈ ಪರಿಸ್ಥಿತಿಯನ್ನು ಎದುರಿಸಲು, ಯಾವ ಶಾಸಕರು ಯಾರಿಗೆ ಮತ ಹಾಕಬೇಕು? ಎನ್ನುವುದನ್ನು ತೀರ್ಮಾನಿಸಲು ಜೂನ್ 16ಕ್ಕೆ ವಂಡರ್ ಲಾ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಭೆಯ ಬಳಿಕ ಶಾಸಕರನ್ನು 18ರವರೆಗೆ ಅಲ್ಲಿಯೇ ಉಳಿಸಿಕೊಂಡು, ಚುನಾವಣೆಯ ದಿನ ನೇರವಾಗಿ ಅಲ್ಲಿಂದ ವಿಧಾನಸೌಧಕ್ಕೆ ಕರೆತರುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಮತಗಳ ಹಂಚಿಕೆ, ಮೊದಲ ಪ್ರಾಶಸ್ತ್ರ, ಎರಡನೇ ಪ್ರಾಶಸ್ತ್ರ ಗಳ ಮತಗಳ ವಿಭಜನೆಯ ಬಗ್ಗೆ ಚರ್ಚೆ ನಡೆಸಲಾಗುವುದು. ವಿಪ್ ಸಹ ಜಾರಿಯಾಗುವ ಸಾಧ್ಯತೆಯಿದೆ. ಈ ಸಭೆಗೆ ಕಾಂಗ್ರೆಸ್‌ ಶಾಸಕರು ಮಾತ್ರವಲ್ಲದೇ. ಪಕ್ಷೇತರ ಹಾಗೂ ಬೆಂಬಲಿತ ಶಾಸಕರಿಗೂ ಆಹ್ವಾನ ನೀಡಲಾಗಿದೆ.

ಜೆಡಿಎಸ್ ಪಕ್ಷಕ್ಕೂ ಅಡ್ಡಮತದ ಆತಂಕ

ಇನ್ನೊಂದೆಡೆ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೂ, ತನ್ನ ಶಾಸಕರು ಅಡ್ಡಮತದಾನ ಮಾಡಬಹುದು ಎನ್ನುವ ಆತಂಕವಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಆರು ಮತಗಳು ಅಗತ್ಯವಿದ್ದರೂ, ಜೆಡಿಎಸ್‌ನ ಕೆಲ ಶಾಸಕರೇ ಗೈರಾಗುವ ಅಥವಾ ಅಡ್ಡಮತದಾನ ಮಾಡುವ ಸಾಧ್ಯತೆಯಿದೆ. ಅದರಲ್ಲಿಯೂ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ.ದೇವೇಗೌಡ ಸೇರಿದಂತೆ ಕೆಲ ಶಾಸಕರ ನಡೆ ನಿಗೂಢವಾಗಿದೆ. ಆದ್ದರಿಂದ ಜೆಡಿಎಸ್ ಸಹ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ.

Related Articles

Back to top button
error: Content is protected !!