ಜನಮನ

ಮೂರು ವರ್ಷಗಳಲ್ಲಿ 9,639 ಮಕ್ಕಳ ಅಪಹರಣ, ನಾಪತ್ತೆಯಾದವರಲ್ಲಿ 6,891 ಹೆಣ್ಣು ಮಕ್ಕಳು!

Views: 71

ಕನ್ನಡ ಕರಾವಳಿ ಸುದ್ದಿ: ಕಳೆದ ಮೂರು ವರ್ಷಗಳಲ್ಲಿ, 2023, 2024 ಹಾಗೂ 2025ರ ನವೆಂಬರ್ 15ರ ವರೆಗೆ ರಾಜ್ಯದಲ್ಲಿ ಒಟ್ಟು 9,639 ಮಕ್ಕಳು ಅಪಹರಣಕ್ಕೊಳಗಾಗಿರುವ ವರದಿಯಾಗಿದೆ ಎಂದು ಗೃಹ ಇಲಾಖೆ ಅಂಕಿ-ಅಂಶ ನೀಡಿದೆ. 2023ರಲ್ಲಿ ರಾಜ್ಯದಲ್ಲಿ 3,039 ಮಕ್ಕಳು, 2024ರಲ್ಲಿ 3,411 ಮಕ್ಕಳು ಹಾಗೂ 2025ರಲ್ಲಿ ಇದುವರೆಗೆ 3,189 ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ.

ನಾಪತ್ತೆಯಾದ ಒಟ್ಟು ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣವೇ ಹೆಚ್ಚಿರುವುದು ಆಘಾತಕಾರಿ ವಿಚಾರವಾಗಿದೆ. ಈ ಅವಧಿಯಲ್ಲಿ ಸುಮಾರು 6,891 ಬಾಲಕಿಯರು ಅಪಹರಣ, ನಾಪತ್ತೆಯಾಗಿದ್ದಾರೆ. ಅಂದರೆ ಒಟ್ಟಾರೆ ಮಕ್ಕಳ ಅಪಹರಣದಲ್ಲಿ 71.50%ರಷ್ಟು ಬಾಲಕಿಯರಿದ್ದಾರೆ. ಅಲ್ಲದೆ, ಒಟ್ಟು 2,748 ಗಂಡು ಮಕ್ಳಳು ಕಣ್ಮರೆ, ಅಪಹರಣಗೊಂಡಿದ್ದಾರೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.

ಮಾಹಿತಿ ಪ್ರಕಾರ, 2023ರಲ್ಲಿ ಅಪಹರಣವಾದ 908 ಬಾಲಕರ ಪೈಕಿ, 873 ಬಾಕಲರು ಪತ್ತೆಯಾಗಿದ್ದು, 35 ಪ್ರಕರಣಗಳಲ್ಲಿ ಪತ್ತೆಯಾಗದೆ ಬಾಕಿ ಉಳಿದುಕೊಂಡಿವೆ. ಒಟ್ಟು 2,131 ಬಾಲಕಿಯರ ಅಪಹರಣ ಕೇಸುಗಳ ಪೈಕಿ, 2,089 ಪತ್ತೆಯಾಗಿದ್ದರೆ, 42 ಇನ್ನೂ ಪತ್ತೆಯಾಗಿಲ್ಲ.

2024ರಲ್ಲಿ ಒಟ್ಟು 975 ಗಂಡು ಮಕ್ಕಳ ಅಪಹರಣಗಳ ಪೈಕಿ 930 ಪತ್ತೆಯಾಗಿದ್ದರೆ, 45 ಬಾಲಕರು ಇನ್ನೂ ಪತ್ತೆಯಾಗಿಲ್ಲ. ಅದೇ ರೀತಿ ಒಟ್ಟು 2,436 ಹೆಣ್ಣು ಮಕ್ಕಳ ಅಪಹರಣ ಪೈಕಿ, 2,336 ಪತ್ತೆಯಾಗಿದ್ದು, 100 ಬಾಲಕಿಯರು ಇನ್ನೂ ಕಂಡುಬಂದಿಲ್ಲ.

2025ರ ನವೆಂಬರ್ 15ರವರೆಗೆ ಒಟ್ಟು 865 ಅಪಹರಣವಾದ ಬಾಲಕರ ಪೈಕಿ 676 ಪತ್ತೆಯಾಗಿದ್ದರೆ, 189 ಬಾಲಕರು ಇನ್ನೂ ಪತ್ತೆಯಾಗಿಲ್ಲ. ಇತ್ತ ಅಪಹರಣವಾದ ಒಟ್ಟು 2,324 ಹೆಣ್ಣು ಮಕ್ಕಳ ಪೈಕಿ 1,641 ಪತ್ತೆಯಾಗಿದ್ದರೆ, 683 ಬಾಲಕಿಯರು ಇನ್ನೂ ಪತ್ತೆಯಾಗಿಲ್ಲ ಎಂಬ ಆತಂಕಕಾರಿ ಅಂಕಿ-ಅಂಶವನ್ನು ಪೊಲೀಸ್ ಇಲಾಖೆ ನೀಡಿದೆ.

ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ಕಿಡ್ನಾಪ್: ಬೆಂಗಳೂರು ನಗರ ಮಕ್ಕಳ ಅಪಹರಣಗಳಲ್ಲಿ ಅಗ್ರಸ್ಥಾನಿ ಎಂಬ ಕುಖ್ಯಾತಿ ಪಡೆದಿದೆ. ಕಳೆದ ಮೂರು ವರ್ಷಗಳಲ್ಲಿ ನಗರದಲ್ಲಿ ಸುಮಾರು 3,268 ಮಕ್ಕಳ ಅಪಹರಣವಾಗಿದೆ. ಈ ಪೈಕಿ ಹೆಣ್ಣು ಮಕ್ಕಳ ಅಪಹರಣ ಸಂಖ್ಯೆ 2,290. ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ವರದಿಯಾಗಿರುವ ಮಕ್ಕಳ ಅಪಹರಣದ ಪೈಕಿ ಸುಮಾರು 24%ರಷ್ಟು ಬೆಂಗಳೂರಿನಲ್ಲೇ ನಡೆದಿದೆ.

ಬೆಂಗಳೂರು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 694 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 493 ಬಾಲಕಿಯರು ಸೇರಿದ್ದಾರೆ. ಉಳಿದಂತೆ, ತುಮಕೂರು ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 450 ಮಕ್ಕಳ ಅಪಹರಣಗಳು ವರದಿಯಾಗಿವೆ. ಈ ಪೈಕಿ, 361 ಬಾಲಕಿಯರು ಕಿಡ್ನಾಪ್, ನಾಪತ್ತೆಯಾಗಿದ್ದಾರೆ. ರಾಮನಗರ ಜಿಲ್ಲೆ (ಬೆಂಗಳೂರು ದಕ್ಷಿಣ) ಯಲ್ಲಿ ಒಟ್ಟು 305 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 226 ಹೆಣ್ಣು ಮಕ್ಕಳಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 301 ಮಕ್ಕಳ ಕಿಡ್ನಾಪ್ ಆಗಿದ್ದು, ಇದರಲ್ಲಿ 212 ಬಾಲಕಿಯರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 297 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 216 ಹೆಣ್ಣು ಮಕ್ಕಳ ಕಿಡ್ನಾಪ್ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಒಟ್ಟು 283 ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 186 ಬಾಲಕಿಯಾಗಿದ್ದಾರೆ. ಹಾಸನದಲ್ಲಿ ಒಟ್ಟು 264 ಮಕ್ಕಳ ಅಪಹರಣ ವರದಿಯಾಗಿದ್ದು, ಈ ಪೈಕಿ 192 ಹೆಣ್ಣು ಮಕ್ಕಳ ಅಪಹರಣ ಕೇಸ್ಗಳಾಗಿದೆ. ಚಿತ್ರದುರ್ಗದಲ್ಲಿ ಒಟ್ಟು 244 ಮಕ್ಕಳ ಕಿಡ್ನಾಪ್ ಆಗಿದ್ದು, ಈ ಪೈಕಿ 192 ಬಾಲಕಿಯರ ಅಪಹರಣ ವರದಿಯಾಗಿದೆ.

Related Articles

Back to top button