ಸಾಮಾಜಿಕ

ಮಹಾಕುಂಭ ಮೇಳದ ಬಾಬಾ ಮಂಗಳೂರಿನ ಎಂಜಿನಿಯರ್‌ ಯುವತಿಯೊಂದಿಗೆ ಮದುವೆ

Views: 154

ಕನ್ನಡ ಕರಾವಳಿ ಸುದ್ದಿ ಪ್ರಯಾಗ್ರಾಜ್ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದ ‘ಐಐಟಿ ಬಾಬಾ’ ಅಭಯ್ ಸಿಂಗ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕುಟುಂಬ ಮತ್ತು ವೃತ್ತಿಯನ್ನು ತೊರೆದು ಬಾಬಾ ಆಗಿದ್ದ ಅವರು ಇದೀಗ, ವೈವಾಹಿಕ ಜೀವನಕ್ಕೆ ಕಾಲಿಟ್ಟು ಅಚ್ಚರಿ ಮೂಡಿಸಿದ್ದಾರೆ.

ಹೌದು. ಐಐಟಿಯನ್ ಬಾಬಾ ಅಭಯ್ ಸಿಂಗ್ ಅವರು ಕರ್ನಾಟಕದ ಮಂಗಳೂರಿನ ಎಂಜಿನಿಯರ್ ಪ್ರತೀಕಾ ಅವರನ್ನು ವಿವಾಹವಾಗಿದ್ದಾರೆ. ದಂಪತಿ ಕುಟುಂಬಸ್ಥರು ವಾಸವಾಗಿರುವ ಝಜ್ಜರ್ ಜಿಲ್ಲೆಯ ಸಸೌಲಿ ಗ್ರಾಮಕ್ಕೆ ಆಗಮಿಸಿದ್ದಾರೆ. ಮನೆಗೆ ಬಂದ ಪುತ್ರ ಮತ್ತು ಸೊಸೆಗೆ ಪೋಷಕರು ಆಶೀರ್ವಾದ ಮಾಡಿದ್ದಾರೆ.

ಐಐಟಿ ಬಾಬಾ ಅಭಯ್ ಸಿಂಗ್ ಮತ್ತು ಪ್ರತೀಕಾ ಅವರು, ಹಿಮಾಚಲ ಪ್ರದೇಶದ ಧರ್ಮಶಾಲಾ ಬಳಿಯ ಖನ್ಯಾರಾದಲ್ಲಿರುವ ಅಘಂಜರ್ ಮಹಾದೇವ್ ದೇವಸ್ಥಾನದಲ್ಲಿ ಫೆಬ್ರವರಿ 15ರಂದು ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸರಳವಾಗಿ ವಿವಾಹವಾಗಿದ್ದಾರೆ.

ಫೆಬ್ರವರಿ 19ರಂದು ದಂಪತಿಯು ನ್ಯಾಯಾಲಯದಲ್ಲಿ ತಮ್ಮ ಮದುವೆಯನ್ನು ನೋಂದಾಯಿಸಿಕೊಂಡಿದ್ದಾರೆ. ಪ್ರತೀಕಾ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದಾರೆ. ಪ್ರಸ್ತುತ, ದಂಪತಿ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ವಾಸಿಸುತ್ತಿದ್ದಾರೆ.

ಗ್ರಾಮಕ್ಕೆ ಆಗಮಿಸಿದ ಐಐಟಿ ಬಾಬಾ ಮತ್ತು ಅವರ ಪತ್ನಿಗೆ ಗ್ರಾಮಸ್ಥರು, ಕುಟುಂಬಸ್ಥರು ಆತ್ಮೀಯ ಸ್ವಾಗತ ನೀಡಿದ್ದಾರೆ. ಅಭಯ್ ಸಿಂಗ್ ಅವರ ತಂದೆ ಕರಣ್ ಸಿಂಗ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ತಾಯಿ ಶೀಲಾ ದೇವಿ ದಂಪತಿಯ ಹಣೆಗೆ ತಿಲಕ ಹಚ್ಚಿ, ಆರತಿ ಬೆಳಗಿ, ಸಿಹಿ ತಿನ್ನಿಸಿ ಸೊಸೆಯನ್ನು ಸಾಂಪ್ರದಾಯಿಕ ‘ಗೃಹ ಪ್ರವೇಶ’ ಮಾಡಿಸಿದ್ದಾರೆ.

ಐಐಟಿ ಬಾಬಾ ಅಭಯ್ ಮತ್ತು ಪತ್ನಿ ಪ್ರತೀಕಾ ಅವರು ತಮ್ಮ ವಿವಾಹ ಮತ್ತು ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಫೆಬ್ರವರಿಯಲ್ಲಿ ಸರಳವಾಗಿ ವಿವಾಹವಾದೆವು. ಸನಾತನ ಸಂಸ್ಕೃತಿಯ ಪ್ರಚಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

 

Related Articles

Back to top button
error: Content is protected !!