ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪ: ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ 3 ಆರೋಪಿಗಳಿಗೆ ಜಾಮೀನು

Views: 70
ಕನ್ನಡ ಕರಾವಳಿ ಸುದ್ದಿ: ಇತ್ತೀಚಿಗೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನು ಕದ್ದರು ಎಂಬ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿದ್ದ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಮೂವರು ಆರೋಪಿಗಳಿಗೆ ಷರತ್ತು ಬದ್ಧ ಜಾಮೀನನ್ನು ಕೋರ್ಟ್ ನೀಡಿ ಆದೇಶ ಹೊರಡಿಸಿದೆ. ಮಹಿಳೆಯ ಮೇಲೆ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ಏಕಸದಸ್ಯ ಪೀಠ ನಡೆಸಿತು. ನಂತರ, ಆರೋಪಿಗಳಾದ ಲಕ್ಷ್ಮೀ, ಶಿಲ್ಪಾ ಹಾಗೂ ಸುಂದರ್ ಅವರಿಗೆ ಷರತ್ತುಬದ್ದ ಜಾಮೀನು ನೀಡಿ ಆದೇಶಿಸಿತು. ಅಲ್ಲದೆ, ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳನ್ನು ಬಂಧಿಸುವ ವೇಳೆ ಅವರಿಗೆ ಸೂಕ್ತ ಕಾರಣಗಳನ್ನು ನೀಡಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ಆರೋಪಿಗಳ ಪರವಾಗಿ ಹೈಕೋರ್ಟ್ ನ್ಯಾಯವಾದಿ ಊರ್ಮಿಳಾ ಪುಲ್ಲಾಟ್ ಹಾಜರಾಗಿದ್ದರು. ಉಳಿದ ಅರೋಪಿಗಳಿಗೆ ಇನ್ನಷ್ಟೇ ಜಾಮೀನು ಸಿಗಬೇಕಿದೆ.
ಮಾರ್ಚ್ 19ರಂದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯೊಬ್ಬರು ಮೀನು ಕದ್ದಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಮೀನುಗಾರಿಕೆಗೆ ತೆರಳಿದ್ದ ಬೋಟ್ನಿಂದ ಮೀನು ಖಾಲಿ ಮಾಡುತ್ತಿದ್ದ ವೇಳೆ ವಿಜಯನಗರ ಜಿಲ್ಲೆಯ ಮಹಿಳೆ ದುಬಾರಿ ಬೆಲೆಯ ಸಿಗಡಿ ಮೀನು ಕದ್ದ ಆರೋಪ ಕೇಳಿಬಂದಿತ್ತು. ಮೀನು ಕದ್ದದ್ದನ್ನು ವಿಚಾರಣೆ ಮಾಡಿದಾಗ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ನಂತರ ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಘಟನೆಯನ್ನು ಖಂಡಿಸಿ ದಲಿತ ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದರು.