ಕರಾವಳಿ

ಮಡಿಕೇರಿ: ಮನೆ ಕೆಲಸಕ್ಕೆ ಹೋದ ಬಾಲಕಿ, ಕೊಲೆಯಾದ 18 ವರ್ಷಗಳ ಬಳಿಕ ದಫನ! 

Views: 159

ಮಡಿಕೇರಿ: ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ ಕಾರ್ಯವನ್ನು ಕುಟುಂಬಸ್ಥರು ನೇರವೇರಿಸಿರುವ ಅಪರೂಪದ ಘಟನೆಯೊಂದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಬರೋಬ್ಬರಿ 18 ವರ್ಷಗಳ ಬಳಿಕ ಕೊಡಗಿನ ಅಯ್ಯಂಗೇರಿಯ ಬಾಲಕಿಯ ದಫನ ಕಾರ್ಯ ಸೋಮವಾರ ನಡೆದಿದೆ.

ಡಿಸೆಂಬರ್ 2006ರಲ್ಲಿ ಸಫಿಯಾ ಎಂಬ ಅಯ್ಯಂಗೇರಿಯ 13 ವರ್ಷದ ಬಾಲಕಿಯ ಕೊಲೆ ನಡೆದಿತ್ತು. ಜೂನ್ 5, 2008ರಂದು ಆಕೆಯ ತಲೆಬುರುಡೆ ಮತ್ತು ಕೆಲವು ಮೂಳೆಯ ತುಣುಕುಗಳು ಪತ್ತೆಯಾಗಿತ್ತು. ಅದನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಲಾಗಿತ್ತು. ಸೋಮವಾರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಪೋಷಕರು, ಅಯ್ಯಂಗೇರಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದ 13 ವರ್ಷದ ಬಾಲಕಿ ಸಫಿಯಾಳನ್ನು ಕಾಸರಗೋಡಿನ ಮುಲಿಯಾರ್ ಮಸ್ತಿಕುಂದ್‌ನ ಸಿವಿಲ್ ಕಾಂಟ್ರಾಕ್ಟರ್ ಕೆ.ಸಿ ಹಂಝ ಮತ್ತು ಮೈಮೂನ ದಂಪತಿ 2006ರಲ್ಲಿ ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಬಳಿಕ ಉದ್ಯೋಗ ನಿಮಿತ್ತ ಹಂಝ ದಂಪತಿ ಗೋವಾಕ್ಕೆ ಶಿಫ್ಟ್ ಆಗಿದ್ದರು. ಈ ವೇಳೆ ಸಫಿಯಾಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು.

ಕೆಲ ತಿಂಗಳ ಬಳಿಕ ಸಫಿಯಾಳನ್ನು ಕಾಸರಗೋಡಿಗೆ ಕರೆದುಕೊಂಡು ಬರುತ್ತೇನೆ ಎಂದು ಹಂಝ ಬಾಲಕಿಯ ತಂದೆ ಮೊಯ್ದು ಅವರಿಗೆ ತಿಳಿಸಿದ್ದರು. ಮಗಳನ್ನು ಬರಮಾಡಿಕೊಳ್ಳಲು ಆಕೆಯ ಇಷ್ಟದ ನೆಲ್ಲಿಕಾಯಿಯ ಜೊತೆ ಮೊಯ್ದು ಅವರು ಕಾಸರಗೋಡಿಗೆ ತೆರಳಿದಾಗ, ಸಫಿಯಾ ಕಾಣೆಯಾಗಿದ್ದಾಳೆ ಎಂದು ಹಂಝ ಹೇಳಿದ್ದರು. ಬಳಿಕ ಬಾಲಕಿಯ ತಂದೆ ಮತ್ತು ಹಂಝ ಜೊತೆಯಾಗಿ ಆದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಒಂದು ವರ್ಷಗಳ ಕಾಲ ಪ್ರಕರಣದ ತನಿಖೆ ನಡೆಸಿದ್ದರು, ಸಫಿಯಾಳಿಗಾಗಿ ಹುಡುಕಾಡಿದ್ದರು. ಆದರೆ ಆಕೆ ಪತ್ತೆಯಾಗಿರಲಿಲ್ಲ. ಈ ನಡುವೆ ಸಫಿಯಾ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗಿತ್ತು. ಸಫಿಯಾಳ ತಾಯಿ ತನ್ನ ಮಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಕೇರಳದ ಕಾಸರಗೋಡು ಪಟ್ಟಣದಲ್ಲಿ 90 ದಿನಗಳ ಪ್ರತಿಭಟನೆಯನ್ನು ನಡೆಸಿದ್ದರು. ಒಂದೂವರೆ ವರ್ಷಗಳ ನಂತರ ಕೇರಳ ಕ್ರೈಂ ಬ್ರಾಂಚ್ ಪ್ರಕರಣವನ್ನು ಕೈಗೆತ್ತಿಕೊಂಡು ಸಫಿಯಾಳ ನಾಪತ್ತೆ ನಿಗೂಢವನ್ನು ಭೇದಿಸಿತ್ತು.

ಕ್ರೈ ಬ್ರಾಂಚ್ ತನಿಖೆಯಲ್ಲಿ ಸಫಿಯಾಳನ್ನು ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಹಂಝ ಕೊಲೆ ಮಾಡಿರುವುದು ಬಯಲಾಗಿತ್ತು. ಹಂಝ ಅವರ ಮನೆಯಲ್ಲಿ ಕೆಲಸ ಮಾಡುವಾಗ ಬಿಸಿ ಗಂಜಿ ಸಫಿಯಾಳ ಮೈಮೇಲೆ ಬಿದ್ದಿತ್ತು. ಇದರಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಸಫಿಯಾಳನ್ನು, ಹಂಝ ಕ್ರೂರವಾಗಿ ಹತ್ಯೆ ಮಾಡಿ, ದೇಹವನ್ನು ತುಂಡರಿಸಿ ನಂತರ ಗೋವಾದ ಅಣೆಕಟ್ಟೆಯೊಂದರ ಬಳಿ ಹೂತಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿದೆ.

ಇನ್ನೂ ಮನೆ ಕೆಲಸ ಮಾಡುವಾಗ ಸಫಿಯಾ ಸುಟ್ಟ ಗಾಯಕ್ಕೆ ಒಳಗಾಗಿದ್ದಳು. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಆಕೆಯನ್ನು ಯಾರಾದರು ನೋಡಿದರೆ ಮನೆಯಲ್ಲಿ ಹಿಂಸಿಸಲಾಗಿದೆ ಅಂದುಕೊಳ್ಳುತ್ತಾರೆ. ಬಾಲ ಕಾರ್ಮಿಕ ಕೇಸ್ ಬೀಳುತ್ತದೆ ಎಂದು ಯೋಚಿಸಿದ ಹಂಝ, ಆಕೆಯನ್ನು ಕೊಲೆ ಮಾಡಿದ್ದ.

ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ 2008ರಲ್ಲಿ ಹಂಝನನ್ನು ಬಂಧಿಸಲಾಗಿತ್ತು. ಜುಲೈ, 2015ರಲ್ಲಿ ಕಾಸರಗೋಡು ಸೆಷನ್ ನ್ಯಾಯಾಲಯ ಹಂಝಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಬಳಿಕ 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು

ಕೊಲೆ ಅಪರಾಧಿ ಹಂಝಗೆ ಶಿಕ್ಷೆಯಾದರೂ, ಸಫಿಯಾಳ ಅಸ್ತಿಪಂಜರ ಕಾಸರಗೋಡು ನ್ಯಾಯಾಲಯದಲ್ಲೇ ಉಳಿದಿತ್ತು. ಅದನ್ನು ಇಸ್ಲಾಂ ಧರ್ಮದ ಪ್ರಕಾರ ದಫನ ಮಾಡಲು ಅವಕಾಶ ಮಾಡಿಕೊಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ ಶುಕೂರ್ ಮೂಲಕ ಪೋಷಕರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್ ಅವರು ಅಸ್ತಿ ಪಂಜರ ಹಸ್ತಾಂತರಕ್ಕೆ ಆದೇಶಿಸಿದ್ದರು.

ನ್ಯಾಯಾಲಯದಿಂದ ಪೋಷಕರಿಗೆ ಹಸ್ತಾಂತರಿಸಿದ ಸಫಿಯಾಳ ಅಸ್ತಿ ಪಂಜವರನ್ನು ಕಾಸರಗೋಡಿನ ಮುಹಿಮ್ಮಾತ್‌ನಲ್ಲಿ ಶುದ್ದಿಗೊಳಿಸಿ (ಸ್ನಾನ) ಬಳಿಕ ಅಯ್ಯಂಗೇರಿ ಮಸೀದಿಯಲ್ಲಿ ಸೋಮವಾರ ರಾತ್ರಿ ದಫನ ಮಾಡಲಾಗಿದೆ. ಈ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.

Related Articles

Back to top button